ಮಂಗಳವಾರ, ಫೆಬ್ರವರಿ 28, 2023

ಸದ್ಗುರು ಅವರ ಪಾದದಡಿ ಕುಳಿತು ಆಶರ್ವಾದ ಪಡೆದ ಬಸವರಾಜ ಬಿರಾದಾರ. ದಿನಾಂಕ: 26-02-2023.





 ಸದ್ಗುರು ಅವರ ಪಾದದಡಿ ಕುಳಿತು ಆಶರ್ವಾದ ಪಡೆದ ಬಸವರಾಜ ಬಿರಾದಾರ. ದಿನಾಂಕ: 26-02-2023.

ತೆರಿಗೆ ಹಣ ನಿಜವಾಗಿಯೂ ದೇವರ ಕೆಲಸಕ್ಕೆ ಉಪಯೋಗವಾಗುತ್ತಿದೆಯೇ ಎಂಬುದನ್ನು ತೆರಿಗೆದಾರರು ಯೋಚಿಸಲೇಬೇಕಾದ ಸಂದರ್ಭ ಬಂದೊದಗಿದೆ.



ವಿಧಾನ ಸೌಧದ ಮುಂದೆ "ಸರ್ಕಾರದ ಕೆಲಸ ದೇವರ ಕೆಲಸ" ಎಂಬ ವಾಕ್ಯವನ್ನು ಬರೆಯಲಾಗಿದೆ. ಈ ವಾಕ್ಯವನ್ನು ಏಕೆ ಬರೆದಿದ್ದಾರೆ ಎಂಬುದನ್ನು ತೆರಿಗೆದಾರರು ಆಳವಾಗಿ ಯೋಚಿಸಲೇಬೇಕಾದ ಕಾಲ ಕೂಡಿ ಬಂದಿದೆ. 

ಯಾವ ಸಂಪನ್ಮೂಲ ಬಹುಜನರ ಒಳಿತಿಗಾಗಿ ಉಪಯೋಗವಾಗುವುದೋ, ಅದೇ ದೇವರ ಕೆಲಸ. ಯಾವ ಸಂಪನ್ಮೂಲ ಕೇವಲ ಕೆಲವು ಜನರ ಒಳಿತಿಗಾಗಿ ಉಪಯೋಗವಾಗಿ ಬಹು ಜನರು ಕಷ್ಟಪಡುವಂತೆ ಆಗುವುದೋ, ಅದುವೇ ಪಶುತ್ವದ ಕೆಲಸ.

ಕೆಲವು ಜನರು ಕಷ್ಟಪಟ್ಟು ಸಂಪಾದಿಸಿದ‌ ಹಣದ ಒಂದು ಭಾಗವನ್ನು ತೆರಿಗೆ ರೂಪದಲ್ಲಿ  ಕಟ್ಟುವುದು ಬಹುಜನರ ಒಳತಿಗಾಗಿ, ಖಂಡಿತ ಅದು ದೇವರ ಕೆಲಸ. ತನು-ಮನ-ಧನ, ಯಾವುದನ್ನೇ ಆದರೂ ಬಹುಜನರ ಒಳತಿಗಾಗಿ ಅರ್ಪಿಸುವುದೇ ದೇವರ ಕೆಲಸ.

ಮುಂದಿನ 20-30 ವರ್ಷಗಳಲ್ಲಿ ಪ್ರಕೃತಿಯ ನಾಶದಿಂದ ಬಹುಜನರು ವಿವಿಧ ರೀತಿಯ ತೊಂದರೆ ಅನುಭವಿಸಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಸಂದರ್ಭ ಬರುತ್ತದೆ ಎಂದು ವಿಶ್ವ ಸಂಸ್ಥೆ ಸ್ಪಷ್ಟವಾಗಿ ಹೇಳುತ್ತಿದೆ. ಹಾಗಾದರೆ, ಬಹುಜನರ ಒಳತಿಗಾಗಿ ಕಟ್ಟಿದ ತೆರಿಗೆ ಹಣ ನಮ್ಮನ್ನಾಳುವ ನಾಯಕರಿಂದ ಬಹುಜನರ ಒಳತಿಗಾಗಿ ಯೋಗ್ಯ ರೀತಿಯಲ್ಲಿ ಉಪಯೋಗವಾಗದರೆ, ಖಂಡಿತ ಈ ರೀತಿಯ ಸಂದರ್ಭ ಸೃಷ್ಟಿಯಾಗಲು ಸಾಧ್ಯವಿಲ್ಲ. ತೆರಿಗೆದಾರರೇ ತಾವು ಆಳವಾಗಿ ಯೋಚಿಸಿ ತೆರಿಗೆ ಹಣ ಕಟ್ಟುವ ಕಾಲ ಕೂಡಿ ಬಂದಿದೆ. ಇಲ್ಲವಾದರೆ, ತಮ್ಮ ತೆರಿಗೆ ಹಣವೇ ಮುಂದೆ ಬಹುಜನರ ನಾಶಕ್ಕೆ ಕಾರಣವಾಗಬಹುದು. ಹಿಂದೆ ಇದೇ ರೀತಿಯ ರಾಜ ಆಡಳಿತದಿಂದ ಕೆಲವು ನಾಗರೀಕತೆಗಳೇ ನಾಶವಾಗಿವೆ.

ಪ್ರಕೃತಿ ನಾಶವೆಂದರೆ, ಸಂಪನ್ಮೂಲಗಳು ಯೋಗ್ಯ ರೀತಿಯಲ್ಲಿ ಬಳಕೆಯಾಗದೇ ನಾಶವಾಗುತ್ತಿವೆ ಎಂದು ಅರ್ಥ. ತೆರಿಗೆದಾರರು ಪ್ರಕೃತಿ ನಾಶಕ್ಕೆ ಮೂಲ ಕಾರಣಗಳೇನು ಎಂಬುದನ್ನು ತಿಳಿದುಕೊಂಡು ಜಾಗೃತರಾಗುವ ಸಮಯ ಇದಾಗಿದೆ. ಕೇವಲ ಅಧಿಕಾರದ ಲಾಲಸೆಯಿಂದ ಹಲವು ಉಚಿತಗಳನ್ನು ಘೋಷಿಸಿ ಜನರನ್ನು ಆಲಸಿಗಳನ್ನಾಗಿಸಿ ಅವರ ಮತ ಪಡೆಯುವುದು, ಅದೇ ಉಚಿತಗಳ ಹಿಂಬಾಗಿಲಿನಿಂದ ಹಣ ಸಂಪಾದಿಸಿ ಚುನಾವಣೆ ಸಂದರ್ಭದಲ್ಲಿ ಹಣ ಹಂಚಿ ಮತ ಪಡೆಯುವುದು ಮತ್ತು ಒಬ್ಬರು ಇನ್ನೊಬ್ಬರನ್ನು ಜಾತಿ-ಮತದ ಹೆಸರಿನಲ್ಲಿ ದೂಷಿಸಿ ಜನರನ್ನು ಮರಳು ಮಾಡಿ ಅವರ ಮತ ಪಡೆಯುವುದು ಮುಖ್ಯ ಕಾರಣಗಳಾಗಿವೆ. ಒಟ್ಟಾರೆಯಾಗಿ ವಾಸ್ತವಿಕ ಸಮಸ್ಯೆಗಳನ್ನು ಮರೆಮಾಚಿ ಜನರನ್ನು ಮರಳು ಮಾಡಿ ಮತ ಪಡೆಯುವುದೇ ಪ್ರಕೃತಿಯ ವಿನಾಶಕ್ಕೆ ಮೂಲ ಕಾರಣ. ಪ್ರಕೃತಿಯ ವಿನಾಶವೇ ಮುಂದೆ ಮಾನವ ಕುಲದ ವಿನಾಶಕ್ಕೆ ಕಾರಣವಾಗುವುದು ಎಂಬುದರ ಪ್ರಜ್ಞೆ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣ. ಇದರ ಕುರಿತು ತೆರಿಗೆದಾರರು ಜಾಗೃತಿ ವಹಿಸುವ ಅವಶ್ಯಕತೆಯಿದೆ.

ವಿವಿಧ ಯದ್ದಿಮೆದಾರರು, ಡಾಕ್ಟರಗಳು, ಇಂಜಿನೀಯರಗಳು, ವಿಜ್ಞಾನಿಗಳು, ಶಿಕ್ಷಕರು ವ್ಯಾಪಾರಿಗಳು ಹಾಗೂ ಪ್ರತಿಯೊಬ್ಬರೂ ಯಾವುದೋ ರೂಪದಲ್ಲಿ ತೆರಿಗೆ ಹಣವನ್ನು ಬಹುಜನರ ಒಳತಿಗಾಗಿ ಕಟ್ಟುತ್ತಿದ್ದಾರೆ. ಆದರೆ, ಅದು ನಿಜವಾಗಿಯೂ ಬಹುಜನರ ಒಳತಿಗಾಗಿ ಉಪಯೋಗವಾಗುತ್ತಿದೆಯೇ ಎಂಬುದರ ಕುರಿತು ಅವರೇ ಯೋಚಿಸಬೇಕಾಗಿದೆ. ಪ್ರಜ್ಞಾವಂತ ತೆರಿಗೆದಾರರು ಇದಕ್ಕೆ ಉತ್ತರ ಕಂಡುಕೊಂಡು ಇತರರಿಗೂ ತಿಳಿಸಬೇಕಾಗಿದೆ.

ತೆರಿಗೆ ಹಣ ಕೇವಲ ಜನರ ಮತ ಪಡೆಯಲು ಜನಪ್ರೀಯ ಯೋಜನೆಗಳಿಗೆ ಉಪಯೋಗವಾಗುತ್ತಿದೆಯೋ ಅಥವಾ ಮನುಕುಲವನ್ನು ಉಳಿಸುವ ದೂರದೃಷ್ಟಿಕೋನದ ಯೋಜನೆಗಳಿಗೆ ಉಪಯೋಗವಾಗುತ್ತಿದೆಯೋ, ಎಂಬುದನ್ನು ತೆರಗೆದಾರರು ಯೋಚಿಸಬೇಕಾದ ಸೂಕ್ತ ಸಮಯವೇ ಚುನಾವಣೆಯ ಸಮಯ. 

ಕಷ್ಟಪಟ್ಟು ದುಡಿದು ಕಟ್ಟಿದ ತೆರಿಗೆದಾರರ ಹಣ ಮುಂದೆ ಸ್ವತಃ ಅವರ ಮಕ್ಕಳ ಭವಿಷ್ಯಕ್ಕೂ ಕುತ್ತು ತರುವ ಸಾಧ್ಯತೆಯಿದೆ. ಇದರ ಕುರಿತು ಪ್ರತಿಯೊಬ್ಬ ತೆರಿಗೆದಾರ ತಮ್ಮ ಮಕ್ಕಳ ಮತ್ತು ಒಟ್ಟಾರೆ‌ ಮನು ಕುಲದ ಒಳತಿಗಾಗಿ ಯೋಚಿಸಿ, ಇತರರಿಗೂ ಕೂಡ ಇದರ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ.

ಈ ವಿಷಯದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ರೇಡಿಯೋ ಸಂದರ್ಶನ ಆಲಿಸಿ... https://missionsavesoil.blogspot.com/2023/02/blog-post_23.html

🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಸೋಮವಾರ, ಫೆಬ್ರವರಿ 27, 2023

ಸರ್ಕಾರಿ ನೌಕರರು ಪಡೆಯುವ ಸಂಬಳ ಕಡಿತವಾಗಿ, ಈಗಿನಂತೆ ಜೀವನ ನಡೆಸಲಾಗದೆ ಪರಿತಪಿಸುವ ಕಾಲ ಬರುವುದು ಬಹಳ ದೂರ ಉಳಿದಿಲ್ಲ



ಪ್ರಕೃತಿಯ ವಿನಾಶದ ಮುನ್ಸೂಚನೆ ರೈತರ ವಿವಿಧ ಸಮಸ್ಯೆಗಳ ರೂಪದಲ್ಲಿ  ಮೊದಲು ವ್ಯಕ್ತವಾಗುವುದು. ಇಂದು ಎಲ್ಲ ವೃತ್ತಿಗಳನ್ನು ಗಣನೆಗೆ ತೆಗೆದುಕೊಂಡರೆ, ಕೃಷಿ ವೃತ್ತಿ ಅತ್ಯಂತ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ.

ಇಂದು ಅನೇಕ ರೈತರು ತಾವು ಉಳುಮೆಗಾಗಿ ಖರ್ಚು ಮಾಡಿದ ಹಣವನ್ನೂ ಕೂಡ ಮರಳಿ ಪಡೆಯಲಾಗದ ಸಂದರ್ಭಗಳು ಸೃಷ್ಟಿಯಾಗುತ್ತಿವೆ. ವರ್ಷದಿಂದ ವರ್ಷಕ್ಕೆ ಕೃಷಿ ಉತ್ಪಾದನಾ ಖರ್ಚು ಹೆಚ್ಚಾಗುತ್ತಾ, ಆದಾಯ ಕಡಿಮೆಯಾಗುತ್ತಿದೆ. ಈಗಾಗಲೇ 50 ಪ್ರತಿಶತಕ್ಕಿಂತ ಹೆಚ್ಚು ರೈತರು  ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಈ ಎಲ್ಲ ಕಾರಣಗಳಿಂದ ಪ್ರಕೃತಿ ವಿನಾಶದ ಕೆಟ್ಟ ಪರಿಣಾಮವನ್ನು ಉಳಿದ ಎಲ್ಲ ವೃತ್ತಿಯ ಜನರೂ ಅನುಭವಿಸಬೇಕಾಗುವ ದಿನಗಳು ಬಹಳ ದೂರ ಉಳಿದಿಲ್ಲ.

ರೈತರ ನಂತರ ಪ್ರಕೃತಿ ವಿನಾಶದ ಕೆಟ್ಟ ಪರಿಣಾಮವನ್ನು ಎದುರಿಸುವವರೇ ಸರ್ಕಾರಿ ನೌಕರರಾಗಿದ್ದಾರೆ. ಇತ್ತೀಚೆಗೆ  ಅತೀ ವೃಷ್ಟಿಯಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ ಸಂದರ್ಭದಲ್ಲಿ, ಸರ್ಕಾರಿ ನೌಕರರು ತಮ್ಮ ಒಂದು ದಿನದ ಸಂಬಳವನ್ನು ರೈತರ ಒಳತಿಗಾಗಿ ದಾನ ರೂಪದಲ್ಲಿ ನೀಡಿದ ಉದಾಹರಣೆಯಿದೆ. ಇದು ಖಂಡಿತ ಒಳ್ಳೆಯ ನಿರ್ಧಾರ. ಆದರೆ, ಮುಂದಿನ ದಿನಗಳಲ್ಲಿ ಕೃಷಿ ಉತ್ಪಾದನೆ ಕುಂಠಿತವಾಗಿ ಆಹಾರದ ಕೊರತೆ ತೀವ್ರವಾದಾಗ, ಆಗಿನ ಸರ್ಕಾರವು ಖಡ್ಡಾಯವಾಗಿ ನೌಕರರ ಸಂಬಳವನ್ನು ಕಡಿತಗೊಳಿಸಬಹುದು ಅಥವಾ ನೌಕರರ ಸಂಖ್ಯೆಯನ್ನು ಕಡಿತಗೊಳಿಸಬಹುದು. ಈ ರೀತಿಯ ನಿರ್ಧಾರಗಳು ಆಗಿನ ಸಂದರ್ಭದಲ್ಲಿ ಆಳುವ ಸರ್ಕಾರಕ್ಕೆ ಅನಿವಾರ್ಯವಾಗುವುದು. 

ಮುಂದಿನ ದಿನಗಳಲ್ಲಿ, ಈ ಮೇಲಿನ ಅನಿವಾರ್ಯತೆಯ ಸಂದರ್ಭವನ್ನು ಸರ್ಕಾರಿ ನೌಕರರು ಏಕೆ ಎದುರಿಸಬೇಕಾಗುವುದು ಎಂಬುದನ್ನು ನೌಕರರು ಈಗಲೇ ತಿಳಿದುಕೊಳ್ಳುವುದು ಅವರ ಭವಿಷ್ಯದ ದೃಷ್ಟಿಕೋನದಿಂದ ಬಹಳ ಒಳ್ಳೆಯದು.

ಇಂದು ಅನೇಕ ಸರ್ಕಾರಿ ನೌಕರರು ತಮ್ಮ ನಿವೃತ್ತಿ ವೇತನದ ಬಗ್ಗೆ ಚಿಂತಿಸುತ್ತಿದ್ದಾರೆ. ಅದರೆ, ಇನ್ನು ಕೆಲವೇ ವರ್ಷಗಳಲ್ಲಿ ತಮಗೆ ಬರಬೇಕಾದ ಸಂಬಳವೂ ಕೂಡ ಬರದಿರುವ ವಾತಾವರಣ ನಿರ್ಮಾಣವಾಗುವುದು ಎಂಬುದರ ಅರಿವು ಅವರಿಗಿಲ್ಲ.

ಇಂದು ಸರ್ಕಾರಿ ನೌಕರರು ತಮ್ಮ ಮತ್ತು ತಮ್ಮ ಮಕ್ಕಳ ಭವಿಷ್ದದ ದೃಷ್ಟಿಕೋನದಿಂದ ಯಾವ ರೀತಿಯ ಮುಂದಿನ ಹೆಜ್ಜೆ ಇಡಬೇಕು ಎಂಬುದನ್ನು ತಿಳಿದುಕೊಳ್ಳಲೇಬೇಕಾದ ಸಂದರ್ಭ ಇದಾಗಿದೆ.

ಪ್ರಕೃತಿಯ ವಿನಾಶದಿಂದ ಮಾನವ ಕುಲ ಸಂಕಷ್ಟಕ್ಕೆ ಈಡಾಗುವುದಕ್ಕೆ ಮುಖ್ಯ ಕಾರಣ ದೂರದೃಷ್ಟಿಕೋನ ರಹಿತ ಸರ್ಕಾರಿ ಜನಪ್ರೀಯ ಯೋಜನೆಗಳು. ಇದರ ಕುರಿತು ಎಲ್ಲರೂ ಆಳವಾಗಿ ಚಿಂತನೆ ಮಾಡಬೇಕಾದ ಸಂದರ್ಭವೇ ಚುನಾವಣೆಯ ಸಮಯ.

ಈ ವಿಷಯದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ರೇಡಿಯೋ ಸಂದರ್ಶನ ಆಲಿಸಿ... https://missionsavesoil.blogspot.com/2023/02/blog-post_23.html

🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಭಾನುವಾರ, ಫೆಬ್ರವರಿ 26, 2023

... ಕೃಷಿಕರು ಪರಾವಲಂಬಿಗಳಾಗಿ ಅವರ ಸಾಲ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು?

ಕೃಷಿ ಇಲಾಖೆಯ  ಯೋಜನೆಗಳ ಸಂಖ್ಯೆ ಹೆಚ್ಚಾದಂತೆ ಕೃಷಿಕರು ಪರಾವಲಂಬಿಗಳಾಗಿ ಅವರ ಸಾಲ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು?

ಕೃಷಿ ಇಲಾಖೆಯ ಅಧಿಕಾರಿಗಳೇ ನೆನಪಿಡಲು ಸಾಧ್ಯವಿರದಷ್ಟು ಇಲಾಖೆಯ ಯೋಜನೆಗಳು ಇದ್ದರೂ ಕೂಡ,  ರೈತರು ಪರಾವಲಂಬಿಗಳಾಗಿ ಅವರ ಸಾಲ ಹೆಚ್ಚಾಗುತ್ತಿರುವುದಕ್ಕೆ ಮೂಲ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲೇಬೇಕಾದ ಸಂದರ್ಭ ಬಂದೊದಗಿದೆ. ಎಲ್ಲ ಯೋಜನೆಗಳ ನಿಜವಾದ ಉದ್ದೇಶ ರೈತರನ್ನು ಸಶಕ್ತರನ್ನಾಗಿ ಮಾಡುವುದೇ ಆಗಿದ್ದರೆ, ಖಂಡಿತ ಯೋಜನೆಗಳು ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಿ  ಸಾಲ ಮುಕ್ತರನ್ನಾಗಿ ಮಾಡುತ್ತಿದ್ದವು. 

ಇಂದು  90 ಪ್ರತಿಶತ ರೈತರು ಬಿತ್ತನೆ ಬೀಜಕ್ಕೂ ಕೂಡ ಬೇರೆಯವರನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗೂ 50 ಪ್ರತಿಶತಕ್ಕಿಂತ ಹೆಚ್ಚು ರೈತರು ಸಾಲದ‌‌ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ.‌ ಇದರ ಜೊತೆಗೆ ಹಲವು ಬೆಳೆಗಳ ಇಳುವರಿ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿವೆ. ಹಾಗಾದರೆ, ಮುಂದಿನ ದಿನಗಳಲ್ಲಿ ರೈತರಿಗೆ ಒಳ್ಳೆಯ ಭವಿಷ್ಯವಿದೆಯೇ? ಎಂಬುದು ಮೂಲ‌‌‌ ಪ್ರಶ್ನೆಯಾಗಿದೆ.

ಈ ಪ್ರಶ್ನೆಗೆ ಉತ್ತರವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ನೀಡಲು ಅರ್ಹರು. ಏಕೆಂದರೆ,
ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ಅದೇ ಕ್ಷೇತ್ರದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸುತ್ತಿರುವುದರಿಂದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ಭವಿಷ್ಯದ ಕುರಿತು ಸ್ಪಷ್ಟತೆ ನೀಡಬಲ್ಲರು. 

ಇಂದು ಅನೇಕ ಕೃಷಿ ಯೋಜನೆಗಳು ರೈತರನ್ನು ಸ್ವಾವಲಂಬಿಗಳನ್ನಾಗಿಸುವ ಬದಲು, ಕೇವಲ ಚುನಾವಣೆ ಸಂದರ್ಭದಲ್ಲಿ ಅವರ ಮತ ಪಡೆಯಲು ಸಫಲವಾಗುತ್ತಿವೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.

ರಾಜಕೀಯ ವ್ಯಾಪಾರೀಕರಣ ವಾಗುತ್ತಿರುವುದೇ ಇದಕ್ಕೆ ಮೂಲ ಕಾರಣವೇ...?

ರೈತ ಉಳಿದರೆ ಮಾತ್ರ ಮುಂದಿನ ಪೀಳಿಗೆ ಉಳಿಯಲು ಸಾಧ್ಯ. ಹಾಗಾಗಿ, ಅವರವರ ಮಕ್ಕಳ‌ ಉತ್ತಮ ಭವಿಷ್ಯಕ್ಕಾಗಿ ಸಮಸ್ಯೆಯ ಮೂಲ ಕಾರಣವನ್ನು ಭೇದಿಸಲೇಬೇಕಾದ ಸಂದರ್ಭ ಬಂದೊದಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ರೇಡಿಯೋ ಸಂದರ್ಶನ ಆಲಿಸಿ...


🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಶನಿವಾರ, ಫೆಬ್ರವರಿ 25, 2023

ಕೃಷಿಯಲ್ಲಿ ಭರವಸೆ ಕಳೆದುಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚಾದಂತೆ ...

ಕೃಷಿಯಲ್ಲಿ ಭರವಸೆ ಕಳೆದುಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚಾದಂತೆ ಕೃಷಿ ವಿಶ್ವವಿದ್ಯಾಲಯಗಳು ಪತನಗೊಳ್ಳುವ ಕಾಲ ಹತ್ತಿರವಾಗುತ್ತಿದೆ ಎಂದು ಅರ್ಥ.

"ಯಾವ ವಿದ್ಯೆಯು ಮಾಡುವ ಕೆಲಸದಲ್ಲಿ ಭರವಸೆಯನ್ನು ಹೆಚ್ಚಿಸುವುದೋ, ಆ ವಿದ್ಯೆಯನ್ನು ನೀಡುವ ವಿದ್ಯಾ ಸಂಸ್ಥೆಗಳು ಉಳಿದು ಬೆಳೆಯಲು ಸಾಧ್ಯ". 

ಕೃಷಿ ವಿಶ್ವವಿದ್ಯಾಲಯಗಳು ತನ್ನ ಕೊನೆಯ ಫಲಾನುಭವಿಯಾದ *ರೈತನಿಗೆ ತನ್ನ ವೃತ್ತಿಯಲ್ಲಿ ಭರವಸೆ ಉಳಿಸಿಕೊಳ್ಳುವಷ್ಟು ವಿದ್ಯೆಯನ್ನು ನೀಡದೆ ಇದ್ದರೆ ಅಥವಾ ರೈತನಿಗೆ ಭರವಸೆಯನ್ನು ನೀಡುವ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಯೋಚಿಸದೇ ಇದ್ದರೆ,* ಖಂಡಿತ ಆ ವಿದ್ಯೆಯನ್ನು ನೀಡುವ ಕೃಷಿ ವಿಶ್ವವಿದ್ಯಾಲಯಗಳು ಪತನಗೊಳ್ಳುವ ಕಾಲ ಹತ್ತಿರವಾಗುತ್ತಿದೆ ಎಂದು ಅರ್ಥ. 

ಭಾರತ ದೇಶದಲ್ಲಿ ಕೇವಲ 2 ಪ್ರತಿಶತ ರೈತರ ಮಕ್ಕಳೂ ಕೂಡ ರೈತರಾಗಲು ಮುಂದೆ‌ ಬರುತ್ತಿಲ್ಲ ಎಂದು ಸಮೀಕ್ಷೆಗಳು ಹೇಳುತ್ತಿವೆ. ಕೃಷಿ ಲಾಭದಾಯಕವಾಗದೇ ಇರುವುದೇ ಇದಕ್ಕೆ ಮೂಲ ಕಾರಣವಾಗಿದೆ. ಡಾಕ್ಟರ್ ಮಕ್ಕಳು ಡಾಕ್ಟರ್ ಆಗಲು ಹಾಗೂ ಇಂಜಿನೀಯರ್ ಮಕ್ಕಳು ಇಂಜನಿಯರಗಳಾಗಲು ಇಚ್ಚಿಸುವುದಕ್ಕೆ ಮೂಲ ಕಾರಣವೇ ಆ ವೃತ್ತಿಯಲ್ಲಿರುವ ಲಾಭ.

ಹಾಗಾದರೆ, ಕೃಷಿ ಏಕೆ ಲಾಭದಾಯಕವಾಗುತ್ತಿಲ್ಲ ಎಂಬುದನ್ನು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಅಲ್ಲಿ ಕಲಿತ ಕೃಷಿ ಪದವೀಧರರು ರೈತರಿಗೆ ತಿಳಿಸಲೇಬೇಕಾದ ಸಂದರ್ಭ ಬಂದೊದಗಿದೆ. ಕೃಷಿ ವಿಶ್ವವಿದ್ಯಾಲಯಗಳ ಉಳಿವು ಅಥವಾ ಅಳಿವು ಕೃಷಿ ವಿಜ್ಞಾನಿಗಳು ಮತ್ತು ಅಲ್ಲಿ ಕಲಿತ ಕೃಷಿ ಪದವೀಧರರ ಮೇಲೆ ನಿಂತಿದೆ.

ಹೆಚ್ಚಿನ ಮಾಹಿತಿಗಾಗಿ‌ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ರೇಡಿಯೋ ಸಂದರ್ಶನ ಆಲಿಸಿ...

🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಶುಕ್ರವಾರ, ಫೆಬ್ರವರಿ 24, 2023

ಮಣ್ಣು ಉಳಿಸಲು ಕೇವಲ ಕೃಷಿಕರಿಗೆ ಭೋದನೆ ಮಾಡಿದರೆ ಸಾಲದು ...

ಮಣ್ಣು ಉಳಿಸಲು ಕೇವಲ ಕೃಷಿಕರಿಗೆ  ಭೋದನೆ ಮಾಡಿದರೆ ಸಾಲದು, ಮಣ್ಣು ಉಳಿಸಲು ಮುಂದಾದ ಕೃಷಿಕರಿಗೆ ಕೃಷಿ ಲಾಭದಾಯಕವಾಗುವ ಕಾನೂನನ್ನು ಅನುಷ್ಠಾನ ಗೊಳಿಸಬೇಕು


ಈಗಾಗಲೇ ಹಲವಾರು ರೀತಿಯ ಸಂಶೋಧನೆಗಳ ಮೂಲಕ ವಿವಿಧ ಸಾವಯವ ಕೃಷಿ ಪದ್ಧತಿಗಳ ಪರಿಚಯವನ್ನು ಪುಸ್ತಕಗಳು, ಆಡಿಯೋ ಮತ್ತು ವಿಡಿಯೋ ರೂಪದಲ್ಲಿ  ರೈತರ ಕೈಗೆಟಕುವ ಹಾಗೆ ವಿವಿಧ ಮಾಧ್ಯಮಗಳ ಮೂಲಕ ನೀಡಲಾಗಿದೆ. ಆದರೆ, ಅನೇಕ ಸಾವಯವ ಕೃಷಿ ತಂತ್ರಜ್ಞಾನಗಳು ಬಳಕೆಯಾಗದೆ ತುಕ್ಕು ಹಿಡಿಯುತ್ತಿವೆ. ಸಾವಯವ ಕೃಷಿ ಎಲ್ಲ ರೈತರಿಗೆ ಲಾಭದಾಯಕವಾಗದೇ  ಇರುವುದೇ ಇದಕ್ಕೆ ಮೂಲ ಕಾರಣವಾಗಿದೆ. 


ಅದಕ್ಕಾಗಿ ಸಾವಯವ ಕೃಷಿ ಲಾಭದಾಯಕವಾಗುವ ಕಾನೂನನ್ನು ವ್ಯವಸ್ಥಿತವಾಗಿ ಅನುಷ್ಠಾನ ಗೊಳಿಸುವುದರಿಂದ ಮಾತ್ರ ಕೃಷಿಯನ್ನು ಲಾಭದಾಯಕವಾಗಿಸಿ ನಾಶವಾಗುತ್ತಿರುವ ಮಣ್ಣನ್ನು ಪುನಶ್ಚೇತನ ಗೊಳಿಸಲು ಸಾಧ್ಯ.


ಹೆಚ್ಚಿನ ಮಾಹಿತಿಗಾಗಿ‌ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ರೇಡಿಯೋ ಸಂದರ್ಶನ ಆಲಿಸಿ...

https://missionsavesoil.blogspot.com/2023/02/blog-post_23.html


🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಗುರುವಾರ, ಫೆಬ್ರವರಿ 23, 2023

ಮಣ್ಣು ಉಳಿಸಿ ಅಭಿಯಾನದ ಕುರಿತು ಬಸವರಾಜ ಬಿರಾದಾರ ಇವರಿಂದ ರೇಡಿಯೋ ಸಂದರ್ಶನ.


 





ಮಣ್ಣು ಉಳಿಸಿ ಅಭಿಯಾನದ ಕುರಿತು ಬಸವರಾಜ ಬಿರಾದಾರ ಇವರಿಂದ ರೇಡಿಯೋ ಸಂದರ್ಶನ. ಇವರು ಉತ್ತರ ಕರ್ನಾಟಕದಾದ್ಯಂತ ಏಕಾಂಗಿಯಾಗಿ ಬೈಕ್ ಮೇಲೆ ಪ್ರಯಾಣಿಸಿ ಮಣ್ಣು ಉಳಿಸಿ ಅಭಿಯಾನದ ಕುರಿತು ಅರಿವು ಮೂಡಿಸಿದ್ದಾರೆ. 
ಕೇವಲ 28 ದಿನಗಳಲ್ಲಿ 3,000 ಕಿ.ಮೀ., ಬೈಕ್ ಮೇಲೆ ಪ್ರಯಾಣಿಸಿ 155 ಕರ್ಯಕ್ರಮಗಳಲ್ಲಿ ಭಾಗವಹಿಸಿ 26,000 ಕ್ಕಿಂತ ಅಧಿಕ ಜನರಿಗೆ ಮಣ್ಣಿನ ಕುರಿತು ಜಾಗೃತಿ ಮೂಡಿಸಿದ್ದಾರೆ.


Subscribe to our Youtube channel

ಬುಧವಾರ, ಫೆಬ್ರವರಿ 22, 2023

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವುದಕ್ಕೆ ಯಾರು ಮೂಲ ಕಾರಣ ಮತ್ತು ಇದರ ಪರಿಣಾಮವನ್ನು ಯಾರು ಎದುರಿಸಬೇಕಾಗುವುದು?


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ನಾಯಕನನ್ನು ಆಯ್ಕೆ ಮಾಡುವಾಗ ಯಾವ ಮಾನದಂಡದ ಮೇಲೆ ಆಯ್ಕೆ ಮಾಡುವೆವೋ ಅದೇ ರೀತಿಯ ಆಡಳಿತ ಆ ನಾಯಕ ನೀಡುತ್ತಾನೆ.

ಹಣ ತೆಗೆದುಕೊಂಡು ಮತ ನೀಡುವ ಜನ ಇರುವ ಕಾರಣಕ್ಕಾಗಿಯೇ, ಹಣ ಹಂಚಿ ಮತ ಪಡೆದು ಗದ್ದುಗೆ ಏರುವ ನಾಯಕರಿದ್ದಾರೆ. ಹಾಗಾದರೆ, ಇಲ್ಲಿ ಯಾರು ಭ್ರಷ್ಟಾಚಾರ ಹೆಚ್ಚಾಗುವುದಕ್ಕೆ ಮೂಲ ಕಾರಣರು. ಪ್ರಜೆಗಳೋ ಅಥವಾ ನಮ್ಮನ್ನಾಳುವ ನಾಯಕರೋ? ಇದಕ್ಕೆ ಇಬ್ಬರೂ ಕೂಡ ಅಷ್ಟೇ ಕಾರಣರು, ಯಾಕೆಂದರೆ ತಾವು ತುಳಿಯುತ್ತಿರುವ ಹಾದಿಯ ಪರಿಣಾಮ ಮುಂದೆ ಏನಾಗುತ್ತದೆ ಎಂಬ ಪ್ರಜ್ಞೆ ಇಬ್ಬರಲ್ಲೂ ಕೂಡ ಇಲ್ಲ. ಇಂದು ತಾವು ಪ್ರಜ್ಞೆಯ ಕೊರತೆಯಿಂದ ಇಡುತ್ತಿರುವ ಪ್ರತಿ ಹೆಜ್ಜೆ ತಮ್ಮ ಮಕ್ಕಳ ಭವಿಷ್ಯವನ್ನು ಹಾಳುಮಾಡುತ್ತದೆ ಎಂಬ ಅರಿವು ಅವರಿಗಿಲ್ಲ. ಹೀಗಾಗಿ, ಆಳುವವನು ಮತ್ತು ಆಳಿಸಿಕೊಳ್ಳುವವನು ಇಬ್ಬರೂ ಭ್ರಷ್ಟಾಚಾರ ಹೆಚ್ಚಾಗುವುದಕ್ಕೆ
ಕಾರಣೀಭೂತರಾಗಿದ್ದಾರೆ.

ಇದರ ಸಂಪೂರ್ಣ ಅರಿವು ಇದ್ದೂ ಕೂಡ ಸುಮ್ಮನೆ ತಮ್ಮ ಪಾಡಿಗೆ ತಾವು ಇರುವರೋ ಹಾಗೂ ವ್ಯವಸ್ಥೆಯನ್ನು ಶಪಿಸುತ್ತಾ ಮತದಾನದಲ್ಲಿಯೂ ಕೂಡ ಭಾಗವಹಿಸುವುದಿಲ್ಲವೋ ಅವರ ಪಾಲು ಭ್ರಷ್ಟಾಚಾರ ಹೆಚ್ಚಾಗುವುದಕ್ಕೆ ಇನ್ನೂ ದೊಡ್ಡದಿದೆ. ಯಾಕೆಂದರೆ, ಎಲ್ಲವೂ ತಿಳಿದೂ ಕೂಡ ತಿಳಿಯದಂತೆ ಇರುವುದು ಮಹಾ ಅಪರಾಧ. ಕೊನೆಗೆ ಈ ವ್ಯವಸ್ಥೆ ತಮ್ಮ ಮಕ್ಕಳ ಬಾಳಿಗೂ ಮುಳ್ಳಾಗುತ್ತದೆ ಎಂಬುದರ ಅರಿವು ಇವರಿಗಿಲ್ಲ. 

ಪ್ರಕೃತಿ ನಾಶವಾಗಿ ನಾಗರೀಕತೆಗಳೇ‌ ನಾಶವಾಗುವ ಸಂದರ್ಭಗಳು ಹತ್ತಿರದಲ್ಲಿ ಇರುವಾಗ, ಎಲ್ಲರೂ ಕೂಡಿ ಪ್ರಜ್ಞಾಪೂರ್ವಕವಾಗಿ ಹೆಜ್ಜೆ ಇಡುವ ಸುಸಂದರ್ಭವೇ ಚುನಾವಣೆಯ ಸಮಯ. ಇಂದು ಅವರವರ ಮಕ್ಕಳ ಭವಿಷ್ಯಕ್ಕಾಗಿ ಪ್ರಜ್ಞಾಪೂರ್ವಕ ಹೆಜ್ಜೆ ಇಡುವ ಅವಶ್ಯಕತೆ  ಎಲ್ಲರಿಗೂ ಬಂದೊದಗಿದೆ.

ಯೋಚಿಸಿ! ನಿಮ್ಮ ಅಭಿಪ್ರಾಯ ತಿಳಿಸಿ.

🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಮಂಗಳವಾರ, ಫೆಬ್ರವರಿ 21, 2023

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಮಾನದಂಡದ ಮೇಲೆ ಒಬ್ಬ ನಾಯಕನನ್ನು ಆಯ್ಕೆ ಮಾಡುತ್ತೇವೆ ಎಂಬುದು ನಮ್ಮ ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತದೆ.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾಗುವ ನಾಯಕನ ನಡೆ ನುಡಿಗಳು ನಮ್ಮ ಮಕ್ಕಳ ಭವಿಷ್ಯವನ್ನು ಖಂಡಿತ ನಿರ್ಧರಿಸುತ್ತವೆ. ತಂದೆ ತಾಯಿಗಳು ಕೈ ಮುಗಿದು ಮಾತನಾಡಿಸುವ ನಾಯಕ ಹಲವು ಚಟಗಳಿಗೆ ದಾಸನಾಗಿದ್ದರೆ, ಅದನ್ನು ನೋಡುವ ಮಕ್ಕಳಿಗೆ ಆ ರೀತಿಯ ನಡೆ ಸಾಮಾನ್ಯವಾಗಿ ತೋರುತ್ತದೆ. ತಂದೆ ತಾಯಿಯಂದಿರು ಹಂತಹ ವ್ಯಕ್ತಿಯನ್ನು ಕೈ ಮುಗಿದು ಗೌರವಿಸುವಾಗ, ನಾವೇಕೆ ಆ ಚಟಗಳನ್ನು ಮಾಡಬಾರದು ಎಂಬ ಪ್ರಶ್ನೆ ಜನ್ಮ‌ ತಾಳುವುದು ಸಾಮಾನ್ಯ. 

ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಕೋನದಿಂದ ನಮ್ಮನ್ನಾಳುವ ನಾಯಕರ ನಡೆ ನುಡಿಗಳನ್ನು ಅವಲೋಕನೆ‌ ಮಾಡಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸೂಕ್ತ ಸಮಯವೇ ಚುನಾವಣೆಯ ಸಮಯ.

🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಭಾನುವಾರ, ಫೆಬ್ರವರಿ 19, 2023

ಪ್ರಕೃತಿಯನ್ನು ಪ್ರೀತಿಸುವುದರಲ್ಲಿ ಇರುವ ಆನಂದ ಮತ್ತಾವುದರಲ್ಲಿಯೂ ಇಲ್ಲ.


ಪ್ರಕೃತಿಯ ಒಂದು ಭಾಗವೇ ನಾವಾದರೂ ಸಹ ಅದರ ಅನುಭವದಿಂದ‌ ದೂರ ಇರುತ್ತೇವೆ. ಇದಕ್ಕೆ ಮುಖ್ಯ ಕಾರಣವೇ ನಮ್ಮ ಪ್ರಜ್ಞೆಯ ಕೊರತೆ. ನೈಸರ್ಗಿಕವಾಗಿ ನಮ್ಮ ಪ್ರಜ್ಞಾ ಸ್ತರವು ಹೆಚ್ಚಾಗುವ ಸೂಕ್ತ ದಿನವೇ ಮಹಾಶಿವರಾತ್ರಿಯ ದಿನ. ಈ ವಿಶೇಷ ದಿನವನ್ನು ಬಹಳ ಅರ್ಥಪೂರ್ಣವಾಗಿ ವಿಜಯಪುರ ಜಿಲ್ಲೆ, ಬಸವನ ಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ ದಿನಾಂಕ:18-02-2023 ರಂದು ಆಚರಿಸಲಾಯಿತು. 

ಕಾರ್ಯಕ್ರಮದಲ್ಲಿ ಸೇರುವ ಎಲ್ಲ ಜನರೂ ಒಗ್ಗೂಡಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರಕೃತಿ ಪ್ರೇಮದ ನೆನಪಿಗಾಗಿ ಆಲದ ಮರವನ್ನು ನೆಡಲಾಯಿತು ಮತ್ತು ಅದು ಒಂದು ಸಾವಿರಕ್ಕಿಂತ ಅಧಿಕ ವರ್ಷ ಬಾಳಲಿ ಎಂದು ಎಲ್ಲರೂ ಒಗ್ಗೂಡಿ ಸಂಕಲ್ಪ ಮಾಡಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು.

ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ
ನಡೆಯುವ ಮಹಾಶಿವರಾತ್ರಿ ಸಂಭ್ರಮದ ನೇರ ಪ್ರಸಾರ ಕಾರ್ಯಕ್ರಮವನ್ನು ದೊಡ್ಡ ಪರದೆಯ ಮೇಲೆ ಸ್ಥಳೀಯ ಈಶಾ ಫೌಂಡೇಷನ್ ನ ಸ್ವಯಂ ಸೇವಕರು ಸೇರಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. 

ಸದ್ಗುರು ಅವರ ಸ್ವರೂಪವಾದ ಸನ್ನಿಧಿ ಯನ್ನು ಕೋಯಿಮತ್ತೂರಿನ ಈಶ ಯೋಗ ಆಶ್ರಮದಿಂದ ತರಿಸಿ ಜನರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. 

ಕಾರ್ಯಕ್ರಮದ ವಿಡಿಯೋ:

🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಶನಿವಾರ, ಫೆಬ್ರವರಿ 18, 2023

ಪ್ರಕೃತಿಯಲ್ಲಿ ನಾನಿರುವೆ' ಎಂದು ಹೇಳಿದ‌ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಮಾತಿನ ಹಿಂದಿರುವ ಅರ್ಥ ಯಾವಾಗ ಎಲ್ಲರಿಗೂ ತಿಳಿಯುವುದೋ ಅಂದು ಪ್ರಕೃತಿ ಉಳಿದು ಮಾನವ ಕುಲ ಉಳಿಯಲು ಸಾಧ್ಯ



ಮುಂದಿನ 20-30 ವರ್ಷಗಳಲ್ಲಿ ಪ್ರಕೃತಿ ನಾಶವಾಗಿ ಸುಮಾರು 200 ಕೋಟಿ ಜನ ಸಾವಿಗೀಡಾಗುವ ಸಾಧ್ಯತೆಯಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ವಿಜ್ನಾನಿಗಳು ಭಾಹ್ಯ ಸಂಶೋಧನೆಯ ಮೂಲಕ ಇದನ್ನು ಕಂಡುಕೊಂಡರೆ, ಆಧ್ಯಾತ್ಮಿಕ ಗುರುಗಳು ಆಂತರಿಕ ಶೋಧನೆ ಮೂಲಕ ಅದರ ಭೀಕರತೆಯನ್ನೂ ಕೂಡ ಕಾಣುತ್ತಾರೆ. ಯಾರು ಆಂತರಿಕ ಶೋಧನೆ ಮೂಲಕ ಮುಂದಾಗುವ ಸಮಸ್ಯೆಯನ್ನು ಆಳವಾಗಿ ಅರಿಯುತ್ತಾರೋ ಅವರು ಸಮಸ್ಯೆಯನ್ನು ಹೋಗಲಾಡಿಸುವ ಜವಾಬ್ದಾರಿಯನ್ನು ಮೊದಲು ತಾವೇ ಹೊರುತ್ತಾರೆ. ಇದೇ ಕಾರಣಕ್ಕೆ ಸಾವಿನಲ್ಲಿಯೂ ಸಹ ಸಿದ್ದೇಶ್ವರ ಶ್ರೀಗಳು ಪ್ರಕೃತಿಯನ್ನು ಉಳಿಸುವ ಅವಶ್ಯಕತೆಯನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದರು. ಅಂದರೆ, ನನ್ನನ್ನು ಕೇವಲ ಪೋಟೋ, ಮೂರ್ತಿ ಹಾಗೂ ಮಂದಿರಗಳಲ್ಲಿ ಕಂಡು  ನನ್ನನ್ನು ಪೂಜೆಗೆ ಸೀಮಿತಗೊಳಿಸದೇ ವಾಸ್ತವಿಕ ಸಮಸ್ಯೆಯನ್ನು ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ ಎಂಬ ಸ್ಪಷ್ಟ ಸಂದೇಶವನ್ನು ನಮಗೆಲ್ಲರಿಗೆ ನೀಡಿದ್ದಾರೆ.  

ಹಾಗಾದರೆ, ನಾವೆಲ್ಲರೂ ಶ್ರೀಗಳ ಮಾತನ್ನು ಅರಿತು ಪ್ರಕೃತಿ ಉಳಿಸುವ ಕಾರ್ಯದಲ್ಲಿ ಒಗ್ಗೂಡಬೇಕಾದ ಅವಶ್ಯಕತೆ ಬಂದೊದಗಿದೆ.

 ಮುಂದಿನ ದಿನಗಳಲ್ಲಿ ಮಾನವ ಜನಾಂಗದ ಮೇಲೆ ಆಗುವ ಭೀಕರ ಪರಿಣಾಮವನ್ನು ಅರಿತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಎಲ್ಲರೂ ನನ್ನ ಪೋಟೊ ಪೂಜಿಸುವ ಕಾರ್ಯದಲ್ಲಿ ಒಗ್ಗೂಡುವ ಬದಲು ಪ್ರಕೃತಿ ಉಳಿಸುವ ಕಾರ್ಯದಲ್ಲಿ ಒಗ್ಗೂಡಿ ಎಂಬ ಸಂದೇಶವನ್ನು "ನನ್ನನ್ನು ಪ್ರಕೃತಿಯಲ್ಲಿ ಕಾಣಿ" ಎಂಬ ಮಾತಿನ ಮೂಲಕ ತಿಳಿಸಿದ್ದಾರೆ.

ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಮಾತನ್ನು ಅರಿತು ಪ್ರಕೃತಿ ಉಳಿಸುವ ಕಾರ್ಯದಲ್ಲಿ ತೊಡಗಿದರೆ ಮಾತ್ರ ನಮ್ಮ ಮಕ್ಕಳಿಗೆ ಒಳ್ಳೆಯ ಭವಿಷ್ಯವಿದೆ. 

ನಮ್ಮ ಕಾಲಘಟ್ಟದಲ್ಲಿ ಕಾಣುವ ಜ್ಞಾನೋದಯ ಹೊಂದಿದ ಗುರುಗಳು ಮತ್ತು ಸದಾ ಜನರ ಒಳಿತನಲ್ಲಿಯೇ ತಮ್ಮ ಒಳಿತನ್ನು ಕಾಣುವ *ಸದ್ಗುರು* ಅವರು *ಮಣ್ಣು ಉಳಿಸಿ* ಅಭಿಯಾನದ ಮೂಲಕ ಪ್ರಕೃತಿ ಉಳಿಸಿ ಮುಂದಿನ ಜನಾಂಗವನ್ನು ಉಳಿಸುವ ಸಂದೇಶವನ್ನು ಜಗತ್ತಿನ ಎಲ್ಲ ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅವರು ಒಂದು ನೂರು ದಿನಗಳಲ್ಲಿ ಇಂಗ್ಲೆಂಡ್ ನಿಂದ ಕರ್ನಾಟಕದ ಕಾವೇರಿ ನದಿಯ ವರೆಗೆ ಒಟ್ಟು 30 ಸಾವಿರ ಕಿಲೋಮೀಟರ್ ಬೈಕ್ ಮೇಲೆ ಪ್ರಯಾಣಿಸಿ ಜಗತ್ತಿಗೆ ಪ್ರಕೃತಿಯನ್ನು ಉಳಿಸಬೇಕಾದ ಅವಶ್ಯಕತೆಯ ಕುರಿತು ಅರಿವು ಮೂಡಿಸಿದರು. ಪ್ರಕೃತಿ ಉಳಿಯಬೇಕಾದರೆ ಮಣ್ಣಿನ ಜೀವಂತಿಕೆ ಹೆಚ್ಚಾಗಬೇಕು, ಮಣ್ಣಿನ ಜೀವಂತಿಕೆ ಹೆಚ್ಚಾಗಬೇಕಾದರೆ, ಮಣ್ಣಿಗೆ ಹೆಚ್ಚು ಗಿಡಮರಗಳ ಮತ್ತು ದನಕರುಗಳ ತ್ಯಾಜ್ಯ ಸೇರಿವಂತಾಗಬೇಕು. ಈ ನಿಟ್ಟಿನಲ್ಲಿ ರೈತರಿಗೆ ಲಾಭವಾಗುವ ಸೂಕ್ತ ಕಾನೂನನ್ನು ಎಲ್ಲ ದೇಶಗಳಲ್ಲಿ ಅನುಷ್ಠಾನ ಆಗಬೇಕು ಎಂಬ ಉದ್ದೇಶದಿಂದ ಮಣ್ಣು ಉಳಿಸಿ ಅಭಿಯಾನವನ್ನು ಸದ್ಗುರು ಅವರು ಪ್ರಾರಂಭಿಸಿದ್ದಾರೆ.

 ಈ ಎಲ್ಲ ಕಾರಣಕ್ಕೆ  ದಿನಾಂಕ : 18-02-2023 ರಂದು  ವಿಜಯಪುರ ಜಿಲ್ಲೆಯ, ಬಸವನ ಬಾಗೇವಾಡಿ ತಾಲ್ಲೂಕಿನ ವಡವಡಗಿ ಗ್ರಾಮದಲ್ಲಿರುವ 'ಓಂ ಆಧ್ಯಾತ್ಮಿಕ ಕೇಂದ್ರ'ದಲ್ಲಿ ನಡೆಯುವ ಮಹಾಶಿವರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಸೇರುವ ಎಲ್ಲ ಜನರೂ ಒಗ್ಗೂಡಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರಕೃತಿ ಪ್ರೇಮದ ನೆನಪಿಗಾಗಿ ಆಲದ ಮರವನ್ನು ನೆಡಲಾಗುವುದು ಮತ್ತು ಅದು ಒಂದು ಸಾವಿರಕ್ಕಿಂತ ಅಧಿಕ ವರ್ಷ  ಬಾಳಲಿ ಎಂದು ಎಲ್ಲರೂ ಒಗ್ಗೂಡಿ ಸಂಕಲ್ಪ ಮಾಡುವ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಇದೇ ಸುಸಂದರ್ಭಸದಲ್ಲಿ,  *"ಇಂದು ನಮ್ಮನ್ನಾಳುವ ನಾಯಕರ ಮೊದಲ ಉದ್ದೇಶ ಏನಾಗಿರಬೇಕು"* ಎಂಬ ವಿಷಯದ ಕುರಿತು ರೈತರ ಮಕ್ಕಳಿಗಾಗಿ ವಿಶೇಷ ಭಾಷಣ ಸ್ಪರ್ಧೆಯನ್ನು ಯುಟುಬ್ ಮುಖಾಂತರ ಏರ್ಪಡಿಸುವ ಯೋಜನೆಯನ್ನು ಘೋಷಿಸಲಾಗುವುದು. ಪ್ರಜ್ಞಾವಂತ ಕೃಷಿ ಪದವೀಧರರು ಸೇರಿ ನೀಡುವ ದೇಣಿಗೆ ಹಣದ ಮೂಲಕ ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ
ಮೊದಲ ಬಹುಮಾನ ಒಂದು ಲಕ್ಷ, ಎರಡನೇ ಬಹುಮಾನ ಐವತ್ತು ಸಾವಿರ ಮತ್ತು ಮೂರನೇ ಬಹುಮಾನ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ನೀಡಲಾಗುವುದು. ಇದರ ಕುರಿತ ವಿಶೇಷ ಸೂಚನೆಗಳನ್ನೊಳಗೊಂಡ  ಪೂರ್ಣ ಮಾಹಿತಿಯನ್ನು ವಿವಿಧ ಸೋಷಿಯಲ್ ಮಿಡಿಯಾಗಳಲ್ಲಿ ಹಂಚಿಕೊಳ್ಳಲಾಗುವುದು.

 *ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರಕೃತಿ ಉಳಿಸುವ ಕನಸು ನನಸಾಗಬೇಕಾದರೆ, ನಾವು ಅಯೋಜಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪ್ರಕೃತಿಯ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಬೇಕು.*

ಯೋಚಿಸಿ! ನಿಮ್ಮ ಅಭಿಪ್ರಾಯ ತಿಳಿಸಿ.

🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಶುಕ್ರವಾರ, ಫೆಬ್ರವರಿ 17, 2023

ಪ್ರಕೃತಿಯ ನಾಶದಿಂದ ಅನೇಕ ಜೀವರಾಶಿಗಳು ನಾಶವಾಗುತ್ತಿರುವ ಸಂದರ್ಭದಲ್ಲಿ ನಡೆದಾಡುವ ದೇವರು ಎಂತಹ ರಾಜಕೀಯ ನಾಯಕರನ್ನು ಮೆಚ್ಚಬಹುದು?

ಮುಂದಿನ 20-30 ವರ್ಷಗಳಲ್ಲಿ ಪ್ರಕೃತಿಯ ನಾಶದಿಂದ ಸುಮಾರು 200 ಕೋಟಿ ಜನ ಸಾವಿಗೀಡಾಗುವ ಸಾಧ್ಯತೆಯಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಇದರಿಂದ ಮಾನವ ಜನಾಂಗದ ಮೇಲೆ ಆಗುವ  ಕೆಟ್ಟ ಪರಿಣಾಮವನ್ನು ಅರಿತ *ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ* ವರು, *"ಪ್ರಕೃತಿಯಲ್ಲಿ ನನ್ನನ್ನು ಕಾಣಿ"* ಎಂಬ ಮಾತುಗಳ ಮೂಲಕ ಎಲ್ಲರ ಮೊದಲ ಗುರಿ ಪ್ರಕೃತಿಯನ್ನು ಉಳಿಸುವುದೇ ಆಗಲಿ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ. ಹಾಗಾದರೆ, *ಶ್ರೀಗಳು ಪ್ರಕೃತಿಯನ್ನು ಉಳಿಸಲು ಮುಂದಾಗುವ ನಾಯಕರನ್ನು ಖಂಡಿತ  ಮೆಚ್ಚುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ.* 

ಇಂದು ನಮ್ಮನ್ನಾಳುವ ನಾಯಕರು ಎಷ್ಟು ಜನ ಶ್ರೀಗಳ ಮಾತಗಳನ್ನು ಅರಿತು  ಪ್ರಕೃತಿಯನ್ನು ಉಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂಬುದು ಮೂಲ ಪ್ರಶ್ನೆಯಾಗಿದೆ.
 
ಇಂದು ಎಷ್ಟು ಜನ ನಾಯಕರು ಶ್ರೀಗಳ ಮಾತನ್ನು ಮೊದಲು ತಾವು ಅರಿತು ಜನರಿಗೂ ಕೂಡ ವಾಸ್ತವಿಕ ಸಮಸ್ಯೆಯ ಕುರಿತು ಅರಿವು ಮೂಡಿಸುತ್ತಿದ್ದಾರೆ ಎಂಬುದನ್ನು ಎಲ್ಲರೂ ಯೋಚಿಸಬೇಕಾದ ಮುಖ್ಯ ವಿಷಯ.

ಮಹಾನ್ ಆಧ್ಯಾತ್ಮಿಕ ಗುರುಗಳು ಮುಂದೆ ಆಗಬಹುದಾದ ಸಮಸ್ಯೆಯನ್ನು ಇಂದು ಅರಿತು ಜನರೆಲ್ಲರನ್ನು ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಗ್ಗೂಡಿಸುತ್ತಿರುತ್ತಾರೆ.  ಎಲ್ಲ ಜೀವರಾಶಿಗಳ ಒಳಿತಿನಲ್ಲಿ ತಮ್ಮ ಒಳಿತನ್ನು ಕಾಣುವುದೇ ಎಲ್ಲ ಆಧ್ಯಾತ್ಮಿಕ ಗುರುಗಳ ಉದ್ದೇಶವಾಗಿದೆ. ಹಾಗಾದರೆ, ಯಾವ ನಾಯಕರು ಶ್ರೀಗಳ  ಉದ್ದೇಶವನ್ನೇ ತಮ್ಮ ಬದುಕಿನ ಉದ್ದೇಶವನ್ನಾಗಿಸಿಕೊಂಡಿರುವರೋ ಅವರನ್ನು ಖಂಡಿತ ಮೆಚ್ಚುತ್ತಾರೆ.

ಯಾವ ನಾಯಕರು ನಡೆದಾಡುವ ದೇವರ ದಾರಿಯಲ್ಲಿ ನಡೆಯುವ ಪ್ರಯತ್ನದಲ್ಲಿ ಇರುವರೋ ಅವರಿಗೆ ಮಾತ್ರ ಮುಂದಿನ ದಿನಗಳ ಎದುರಾಗಬಹುದಾದ ಸಮಸ್ಯೆಯ ಅರಿವು ಉಂಟಾಗುವುದು.  ಅಂದರೆ, ದೂರ ದೃಷ್ಟಿಕೋನ ಅವರದ್ದಾಗಿ ಇತರರೂ ಕೂಡ ದೂರ ದೃಷ್ಟಿಕೋನ ಹೊಂದುವಂತೆ ಸ್ಪೂರ್ತಿ ತುಂಬುವ ಕೆಲಸ ಅವರದ್ದಾಗಿರುವುದು. ಎಲ್ಲರನ್ನು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಗ್ಗೂಡಿಸುವವರು ಮಾತ್ರ ಜನರನ್ನು ಆಳುವ ನಿಜವಾದ ನಾಯಕರಾಗಿರುವರು. ಅವರೂ ಕೂಡ ನಡೆದಾಡುವ ದೇವರಂತೆ ಅಜರಾಮರವಾಗಿ ಉಳಿಯುವರು. ಇದೇ ಕಾರಣಕ್ಕೆ, ಕೃಷ್ಣನ ಜೊತೆಯಲ್ಲಿ ಪಾಂಡವರ ಹೆಸರು, ಚಾಣಕ್ಯನ ಜೊತೆಯಲ್ಲಿ ಚಂದ್ರಗುಪ್ತ ಮೌರ್ಯರ ಹೆಸರು ಹಾಗೂ ಸಮರ್ಥ ರಾಮದಾಸರ ಜೊತೆಯಲ್ಲಿ ಶಿವಾಜಿ ಮಹಾರಾಜರ ಹೆಸರು ಅಜರಾಮರವಾಗಿ ಉಳಿದಿವೆ.

ದೂರದೃಷ್ಟಿಕೋನ ಹೊಂದಿರುವುದು ಮತ್ತು ಮೊದಲು ತಾನು  ಮಾದರಿಯಾಗಿ ನಡೆದು ಇತರರಿಗೆ ಸ್ಪೂರ್ತಿ ತುಂಬುವುದು ಒಬ್ಬ ಶ್ರೇಷ್ಟ ನಾಯಕನಲ್ಲಿರುವ ಮುಖ್ಯ ಗುಣಗಳಾಗಿವೆ.

ಇಂದು ಶ್ರೀಗಳ ಭಕ್ತರಾದ ಜನಸಾಮಾನ್ಯರು ಯಾವ ನಾಯಕರು ಪ್ರಕೃತಿ ಉಳಿಸುವ ಕಾರ್ಯಕ್ಕೆ ಆದ್ಯತೆ ನೀಡುವರೋ ಅವರನ್ನು ಮೆಚ್ಚಬಹುದೆ? ಅಂತಹ ನಾಯಕರಿಗೆ ಆದ್ಯತೆ ಮೇರೆಗೆ ಮತ ನೀಡಿ ಮುಂದಿನ ದಿನಗಳಲ್ಲಿ ಜರಗುವ ಚುನಾವಣೆಗಳಲ್ಲಿ ಗೆಲ್ಲುವಂತೆ ಮಾಡಬಹುದೆ? ನಾವು ಈ ರೀತಿ  ನಡೆದುಕೊಂಡರೆ ಮಾತ್ರ ಶ್ರೀಗಳಿಗೆ ಅರ್ಪಿಸುವ ನಿಜವಾದ ಗೌರವ ಸಮರ್ಪಣೆ.

ಯಾವ ಸಮಸ್ಯೆಯನ್ನು ಮುಂದಿನ ದಿನಗಳಲ್ಲಿ ಎಲ್ಲರೂ ಎದುರಿಸಬೇಕಾಗಿದೆಯೋ ಅದರ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯವನ್ನು ಇಂದು ಕೈಗೆತ್ತಿಕೊಳ್ಳಲೇಬೇಕಾಗಿದೆ. ಅದು ಹೇಗೆ ಎಂಬುದೇ ಮೂಲ ಪ್ರಶ್ನೆಯಾಗಿದೆ.

ಯೋಚಿಸಿ! ನಿಮ್ಮ ಅಭಿಪ್ರಾಯ ತಿಳಿಸಿ.

🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಗುರುವಾರ, ಫೆಬ್ರವರಿ 16, 2023

ಹಿಂದೆ ಅನೇಕ ನಡೆದಾಡುವ ದೇವರುಗಳು ಮಹಾನ್ ರಾಜಕೀಯ ನಾಯಕರನ್ನು ತಯಾರಿ ಮಾಡಿ, ಅವರಿಂದ ತಮ್ಮ ಸತ್ಯ ಸಂಕಲ್ಪ ನೆರವೇರುವಂತೆ ಮಾಡಿದ್ದಾರೆ. ಹಾಗಾದರೆ ಇಂದು...?

ಕೃಷ್ಣನಿಂದ ಪಾಂಡವರು,
ಚಾಣಕ್ಯನಿಂದ ಚಂದ್ರಗುಪ್ತ ಮೌರ್ಯ ಹಾಗೂ ಸಮರ್ಥ ರಾಮದಾಸರಿಂದ ಶಿವಾಜಿ ಮಹಾರಾಜ. ಹೀಗೆ ಅನೇಕ ನಡೆದಾಡುವ ದೇವರುಗಳು ತಮ್ಮ ಶಿಷ್ಯರ ಮುಖಾಂತರ ಶ್ರೇಷ್ಠ ಸಂಸ್ಕೃತಿ ಜನ್ಮ ತಾಳುವಂತೆ ಮಾಡಿದ್ದಾರೆ ಅಥವಾ ಅಳಿವಿನಂಚಿನಲ್ಲಿರುವ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ್ದಾರೆ. ಹಾಗಾದರೆ, ನಮ್ಮ ಕಾಲಘಟ್ಟದಲ್ಲಿ ಆಗಿ ಹೋದ ನಡೆದಾಡುವ ದೇವರಾದ *ಶ್ರೀ ಸಿದ್ದೇಶ್ವರ ಸ್ವಾಮೀಜಿ* ಯವರ ಸತ್ಯ ಸಂಕಲ್ಪದಿಂದ ಇಂದು‌ ಅಳಿವಿನಂಚಿನಲ್ಲಿರುವ ಸಂಸ್ಕೃತಿ ಖಂಡಿತ ಉಳಿದು ಬೆಳೆಯುವ ಕಾಲ ಕೂಡಿ ಬಂದಿದೆ. ಅವರು ಆಡಿದ ಪ್ರತಿಯೊಂದು ಮಾತು, ಅದು ಕೇವಲ್ಲ ಮಾತಲ್ಲ, ಅದು ಶ್ರೇಷ್ಠ ಮಂತ್ರ. ಆ ಮಂತ್ರದ ಸಾತ್ವಿಕ ಪರಿಣಾಮ ಉಂಟಾಗುವ ಕಾಲ ಒಂದು ದಿನ ಕೂಡಿ ಬರುವುದು. ಯಾವ ರೂಪದಲ್ಲಿ ಒಬ್ಬ ಆಧ್ಯಾತ್ಮಿಕ ಗುರು ತನ್ನ ಶಿಷ್ಯರನ್ನು ತಯಾರಿ ಮಾಡಿ ತಮ್ಮ ಸತ್ಯ ಸಂಕಲ್ಪ ಇಡೇರುವಂತೆ ಮಾಡುವರೋ ಅದು ತಿಳಿಯದು.

ಹಿಂದೆ ಅನೇಕ ಆಧ್ಯಾತ್ಮಿಕ ಗುರುಗಳು ತಾವು ಇದ್ದಾಗ ಎಷ್ಟು ಕೆಲಸ‌ ಮಾಡಿದ್ದರೋ, ತಾವು ಗತಿಸಿದ ನಂತರ ಯಾರೂ ಊಹಿಸದಷ್ಟು ಕೆಲಸ ಮಾಡಿದ್ದಾರೆ.

ಇಂದು ಅಳಿವಿನಂಚಿನಲ್ಲಿರುವ ಭಾರತೀಯ ಸಂಸ್ಕೃತಿಯನ್ನು ಪುನಶ್ಚೇತನಗೊಳಿಸುವ ಅವಶ್ಯಕತೆಯಿದೆ. ಹಾಗಾದರೆ, ಸಂಸ್ಕೃತಿ, ಪ್ರಕೃತಿ ಮತ್ತು ವಿಕೃತಿಯ ಮಧ್ಯದ ವ್ಯತ್ಯಾಸ ತಿಳಿದರೆ, ನಾವು ಇಂದು ಯಾವುದರೊಂದಿಗೆ ಸಾಗುತ್ತಿದ್ದೇವೆ ಎಂಬುದು ತಿಳಿಯುವುದು. ಸಂಸ್ಕೃತಿ ಎಂದರೆ ತಮ್ಮ ಸುತ್ತಲ ನಿಸರ್ಗದ ವೈಭವವನ್ನು ಇರುವುದಕ್ಕಿಂತಲೂ ಹೆಚ್ಚಿಸುವ ನಿಟ್ಟಿನಲ್ಲಿ ಸಾಮಾಜಿಕ ವ್ಯವಸ್ಥೆಯಿದೆ ಎಂದು ಅರ್ಥ. ಪ್ರಕೃತಿ ಎಂದರೆ ತಮ್ಮ ಸುತ್ತಲ ನಿಸರ್ಗದ ವೈಭವ  ಹೇಗಿದೆಯೋ ಹಾಗಿಯೇ ಉಳಿಸಿ ಅದಕ್ಕೆ ಯಾವುದೇ ಹಾನಿಯಾಗದಂತ ಸಾಮಾಜಿಕ ವ್ಯವಸ್ಥೆಯಿದೆ ಎಂದು ಅರ್ಥ. ವಿಕೃತಿ ಎಂದರೆ ತಮ್ಮ ಸುತ್ತಲ ನಿಸರ್ಗದ ವೈಭವ ನಾಶವಾಗಿ ಅನೇಕ ಜೀವರಾಶಿಗಳು ಹಾನಿಯಾಗುವ ಸಾಮಾಜಿಕ ವ್ಯವಸ್ಥೆಯಿದೆ ಎಂದು ಅರ್ಥ. ಹಾಗಾದರೆ, ಇಂದು ಭೂಮಿಯ ಮೇಲಿನ ಹೆಚ್ಚಿನ ಜನರು ಯಾವ ಸಾಮಾಜಿಕ ವ್ಯವಸ್ಥೆಯೊಂದಿಗೆ ಬದಕುತ್ತಿದ್ದಾರೆ ಎಂಬುದನ್ನು ಯೋಚಿಸುವ ಸಮಯ ಇದಾಗಿದೆ.

ಎಲ್ಲಿ ಜನರ ಪ್ರಜ್ಞಾ ಸ್ತರ ಹೆಚ್ಚಿಸುವ ಸಾಮಾಜಿಕ ವ್ಯವಸ್ಥೆ ಇರುವುದೋ ಅದುವೇ ಶ್ರೇಷ್ಠ ಸಂಸ್ಕೃತಿ ಜನ್ಮ ತಾಳುವುದಕ್ಕೆ ಕಾರಣ. ಎಲ್ಲಿ ಜನರ ಪ್ರಜ್ಞಾ ಸ್ತರ ನಾಶವಾಗುವ  ಸಾಮಾಜಿಕ ವ್ಯವಸ್ಥೆ ಇರುವುದೋ ಅದುವೇ ವಿಕೃತಿ ಜನ್ಮ ತಾಳುವುದಕ್ಕೆ ಕಾರಣ. 

ಯಾವಾಗ ಸಮಾಜದಲ್ಲಿ ಶ್ರೇಷ್ಠ ಆಧ್ಯಾತ್ಮಿಕ ಜೀವಿಗಳ ಮಾರ್ಗದರ್ಶನದಲ್ಲಿ ನಡೆಯುವ ನಾಯಕರು ಉತ್ಪತ್ತಿಯಾದರೋ, ಆಗ ಸುಸಂಸ್ಕೃತ ಸಮಾಜಿಕ ವ್ಯವಸ್ಥೆ ನಿರ್ಮಾಣವಾಗಿದೆ. ಎಲ್ಲಿ ಆಧ್ಯಾತ್ಮಿಕ  ಜೀವಿಗಳ ಮಾರ್ಗದರ್ಶನದಲ್ಲಿ ನಡೆಯುವ ನಾಯಕರ ಕೊರತೆ  ಉಂಟಾಗಿದೆಯೋ ಅಲ್ಲಿ ವಿಕೃತ ಸಾಮಾಜಿಕ ವ್ಯವಸ್ಥೆ ನಿರ್ಮಾಣವಾಗಿದೆ. 

ಇಂದು ಈಗಾಗಲೇ ಇರುವ ಸಂಸ್ಕೃತಿ ನಾಶವಾಗಿ ಸಮಾಜದಲ್ಲಿ ವಿಕೃತಿ ತಾಂಡವವಾಡುತ್ತಿರುವುದಕ್ಕೆ ಮುಖ್ಯ ಕಾರಣವೇ ಆಧ್ಯಾತ್ಮಿಕ ಜೀವಿಗಳ ಮಾರ್ಗದರ್ಶನದಲ್ಲಿ ನಡೆದು ಸುಂದರ ಸಾಮಾಜಿಕ ವ್ಯವಸ್ಥೆ ನಿರ್ಮಿಸುವ ರಾಜಕೀಯ ನಾಯಕರ ಕೊರತೆ. ಈ ಕೊರತೆಯನ್ನು ನೀಗಿಸುವುದೇ ಶ್ರೇಷ್ಠ ಆಧ್ಯಾತ್ಮಿಕ ಜೀವಿಗಳ ಜೀವನದ ಉದ್ದೇಶವಾಗಿರುತ್ತದೆ.

ನಮ್ಮ ಕಾಲಘಟ್ಟದಲ್ಲಿ  ನಡೆದಾಡುವ ದೇವರೆಂದು ಗುರುತಿಸಿಕೊಂಡ ಆಧ್ಯಾತ್ಮಿಕ ಜೀವಿಯಾದ *ಶ್ರೀ ಸಿದ್ದೇಶ್ವರ ಸ್ವಾಮೀಜಿ* ಯವರು ಕೂಡ ಸುಂದರ ಸಾಮಾಜಿಕ ವ್ಯವಸ್ಥೆ ನಿರ್ಮಿಸುವ ನಾಯಕರನ್ನು ಈಗಾಗಲೇ ತಮ್ಮ ಮಾತೆಂಬ ಮಂತ್ರದ ಮೂಲಕ ಪ್ರಭಾವ ಬೀರಿ ಅವರನ್ನು ಆಂತರಿಕವಾಗಿ ತಯಾರಿ ಮಾಡಿದ್ದಾರೆ. ಇನ್ನು ಭಾಹ್ಯದಲ್ಲಿ ಅವರ ಕೆಲಸ ಪ್ರಾರಂಭವಾಗುವ ಕಾಲ ಕೂಡಿ ಬರುತ್ತಿದೆ. ಈ ರೀತಿ ನಡೆದಾಡುವ ದೇವರ ಪ್ರಭಾವಕ್ಕೆ ಒಳಗಾದವರಲ್ಲಿ ತಾವೂ ಕೂಡ ಒಬ್ಬರಾಗಿರುವಿರೇ ಯೋಚಿಸಿ. ಹೌದಾದರೆ, ತಾವು ಕಾರ್ಯೋನ್ಮುಖರಾಗುವ ಕಾಲ ಕೂಡಿ ಬಂದಿದೆ. 

ಖಂಡಿತ ನಡೆದಾಡುವ ದೇವರ ಮಾರ್ಗದರ್ಶನದಲ್ಲಿ ನಡೆದು ಸುಂದರ ಸಾಮಾಜಿಕ ವ್ಯವಸ್ಥೆ ನಿರ್ಮಿಸುವ ನಾಯಕರ ಕಾಲ ಕೂಡಿ ಬಂದಿದೆ. ಇನ್ನು ಅವರು ಒಗ್ಗೂಡಿ ಕೆಲಸ ಮಾಡುವುದೊಂದೇ ಬಾಕಿ ಇದೆ ಹಾಗೂ ಅಂತಹ ನಾಯಕರನ್ನು ಒಗ್ಗೂಡಿಸುವ ಪ್ರಯತ್ನಗಳು ಪ್ರಾರಂಭವಾಗಬೇಕಾಗಿದೆ.

ಸುಂದರ ಸಾಮಾಜಿಕ ವ್ಯವಸ್ಥೆ ನಿರ್ಮಿಸಿ ಪ್ರಕೃತಿಯನ್ನು ಉಳಿಸುವ ನಾಯಕರನ್ನು ಒಗ್ಗೂಡಿಸುವ ಪ್ರಯತ್ನವನ್ನು ನಾವು ಮಾಡಬಹುದೆ?

ಯೋಚಿಸಿ! ನಿಮ್ಮ ಅಭಿಪ್ರಾಯ ತಿಳಿಸಿ.

🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಬುಧವಾರ, ಫೆಬ್ರವರಿ 15, 2023

ನಡೆದಾಡುವ ದೇವರು ಪ್ರಕೃತಿ ಉಳಿಸಲು ಮತ್ತೆ ನಮ್ಮ ಮೂಲಕ ನಡೆದಾಡಲು ಇಚ್ಚಿಸದರೆ, ನಾವು ಅದಕ್ಕೆ ಅವಕಾಶ ನೀಡಬಹುದೆ?

ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಯವರು ತಮ್ಮ ಜೀವನಪರ್ಯಂತ  ಪ್ರಕೃತಿ ಮಾತೆಯನ್ನು ಅರಿಯಲು ಪ್ರಯತ್ನಿಸಿ ಕೇವಲ ಪ್ರಕೃತಿಯ ಕುರಿತು ಜ್ಞಾನವನ್ನು ಹಂಚುವ ಕಾರ್ಯಕದಲ್ಲಿ ತೊಡಗಿದ್ದರು. ಅವರು ಹಂಚಿದ ಜ್ಞಾನ ವ್ಯರ್ಥವಾಗದೇ ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬಂದು ಪ್ರಕೃತಿ ಉಳಿಯುವಂತಾಗಲು ಅವರು  ನಮ್ಮ ಮೂಲಕ ನಡೆದಾಡಲು ಇಚ್ಚಿಸಿದರೆ, ನಾವು ಅದಕ್ಕೆ ಅವಕಾಶ ನೀಡಬಹುದೆ? 


ಮುಂದಿನ 20-30 ವರ್ಷಗಳಲ್ಲಿ ಪ್ರಕೃತಿ ನಾಶವಾಗಿ ಸುಮಾರು 200 ಕೋಟಿ ಜನ ಸಾವಿಗೀಡಾಗುವ ಸಂದರ್ಭವಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಅಂದರೆ, ಇದು ಒಟ್ಡಾರೆ ಮಾನವ ಜನಾಂಗ ಎದುರಿಸಬೇಕಾದ ದೊಡ್ಡದಾದ ಸಮಸ್ಯೆ. ಹಾಗಿದ್ದರೆ, ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲೇಬೇಕಾದ ಸಂದರ್ಭ ಬಂದೊದಗಿದೆ. "ಕಳೆದ 10 ಸಾವಿರ ವರ್ಷಗಳಿಂದ ಈ ಭೂಮಿಯ ಮೇಲೆ ದೊಡ್ಡದಾದ ಸಮಸ್ಯೆ ತಲೆ ದೋರಿದಾಗ ಆ ಸಮಸ್ಯೆಗೆ ಪರಿಹಾರ ನೀಡಿದ ದೇಶ ಯಾವುದಾದರೂ ಇದ್ದರೆ, ಅದು ಭಾರತ ದೇಶ " ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಖಂಡಿತ, ಅದೇ ಆಧ್ಯಾತ್ಮಿಕ ಶಕ್ತಿಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡು ಇತರ ದೇಶಗಳಿಗೆ ಮಾದರಿಯಾಗಿ  ಹಲವು ಬಾರಿ ಭಾರತ ದೇಶ 'ವಿಶ್ವ ಗುರು 'ವಾಗಿ ನಿಂತಿದೆ. ಹಾಗಾದರೆ, ಮತ್ತೊಮ್ಮೆ ಭಾರತ ದೇಶ ಈ ಜ್ವಲಂತ ಸಮಸ್ಯೆಗೆ ಪರಿಹಾರ ಕಂಡುಕೊಂಡು ಇತರ ದೇಶಗಳಿಗೆ ಮಾದರಿಯಾಗಿ ನಿಂತು 'ವಿಶ್ವ ಗುರು' ಆಗಬಹುದೆ?


ವಿಶ್ವ ಗುರು ಭಾರತವಾಗಬೇಕಾದರೆ, ಅದು ತಾನೇ ಆಗುವುದಿಲ್ಲ ನಾವು ಮಾಡಬೇಕಾಗುತ್ತದೆ. ಅಂದರೆ, ನಡೆದಾಡುವ ದೇವರುಗಳು ನಡೆದ ದಾರಿಯಲ್ಲಿ ಸ್ವಲ್ಪವಾದರೂ ನಡೆಯುವ ಜನ ಬೇಕಾಗುತ್ತದೆ. ಅಂತಹ ಜನರನ್ನು ಯಾವುದೋ ರೂಪದಲ್ಲಿ ಆಯಾ ಕಾಲಘಟ್ಟದಲ್ಲಿ ಆಗಿ ಹೋದ ಆಧ್ಯಾತ್ಮಿಕ ಪುರುಷರು ತಯಾರಿ ಮಾಡುತ್ತಾರೆ. ಆ ಜನರ ಮೂಲಕವೇ ಸಮಸ್ಯೆಗೆ ಪರಿಹಾರ ದೊರೆಯುವಂತೆ ಆಗುತ್ತದೆ.


ಈ ನಿಟ್ಟಿನಲ್ಲಿ ನಮ್ಮ ಕಾಲಘಟ್ಟದಲ್ಲಿ ಆಗಿ ಹೋದ ಮಹಾನ್ ಆಧ್ಯಾತ್ಮಿಕ ಗುರುಗಳೇ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು. ಯಾವುದೋ ರೂಪದಲ್ಲಿ ಅವರ ಪ್ರಭಾವಕ್ಕೆ ಒಳಗಾದವರ ಮೂಲಕ ಪ್ರಕೃತಿ ಉಳಿಸುವ ಕಾರ್ಯ ಅಗುವಂತೆ ಮಾಡಲು ಅವರು ಇಂದು ಹಂಬಲಿಸುತ್ತಿದ್ದಾರೆ.


ಭಾರತ ದೇಶ ಹಿಂದಿನಿಂದಲೂ ಗುರು ಶಿಷ್ಯ ಪರೆಂಪರೆಯಿಂದಲೇ ಉಳಿದು ಬೆಳೆದಿದೆ. ಅಂದರೆ, ಒಬ್ಬ ಮಹಾನ್ ಆಧ್ಯಾತ್ಮಿಕ ಗುರು ಅವತರಿಸಿದರೆ, ಲಕ್ಷಾಂತರ ಜನ ಅವರ ಶಿಷ್ಯರು ಗುರುವಿನ ಗುರಿಯನ್ನೇ ತಮ್ಮ ಗುರಿಯನ್ನಾಗಿಸಿಕೊಂಡು ನಡೆದು ಮುಕ್ತಿಗೆ ಹತ್ತಿರವಾಗಿದ್ದಾರೆ. ಹಾಗಾದರೆ, ಶ್ರೀಗಳ ಪ್ರಕೃತಿ ಉಳಿಸುವ ಗುರಿ ಅವರ ಶಿಷ್ಯರ ಗುರಿ ಆಗಬಹುದೆ? ಖಂಡಿತ, ಇಂದು ಈ ಗುರಿಯೊಂದಿಗೆ ನಡೆಯುವ ಕೋಟ್ಯಾಂತರ ಜನರ ಅವಶ್ಯಕತೆಯಿದೆ.


ಉರಿವ ದೀಪದ ಹತ್ರಿರ ಬಂದ ಕೀಟ ಅದರ ಸುತ್ತ ಸುತ್ತುತ್ತಲೇ ಬೆಂಕಿಗೆ ಆಹುತಿಯಾಗಿ ತಾನೂ ಅದರಲ್ಲಿ ಒಂದಾಗಿ ದೀಪ ಹೆಚ್ಚು ಬೆಳಗುವಂತೆ ಮಾಡುವುದು. ಇದೇ ರೀತಿ ನಡೆದಾಡುವ ದೇವರ ಗುರಿಯೊಂದಿಗೆ ನೆಡೆಯಲು ಪ್ರಾರಂಭಿಸಿದರೆ ಒಂದು ದಿನ ಅವರ ಒಂದು ಅಂಶವೇ ನಾವಾಗಿ ನಡೆಯಲು ಪ್ರಾರಂಭಿಸುತ್ತೇವೆ. ನಮ್ಮ ಕಾಲಘಟ್ಟದಲ್ಲಿ ಆಗಿಹೋದ ಮಹಾನ್ ಚೇತನದ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುವುದೇ ಭಕ್ತಿ.


ಭಕ್ತಿ ಎಂದರೆ ದಿಕ್ಸೂಚಿ ಇಲ್ಲದ ಹಡಗಿನಲ್ಲಿ ಕೇವಲ ಹಡಗು ಚಲಿಸುವಾತನನ್ನು ನಂಬಿ ನಡೆದಂತೆ. ಇದು ಹಡಗು ಚಲಿಸುವಾತನ ಮೇಲಿನ ನಂಬಿಕೆಯನ್ನು ಅವಲಂಬಿಸಿದೆ. ಹಾಗಿದ್ದರೆ, ನಾವು ನಡೆದಾಡುವ ದೇವರನ್ನು ನಂಬಿ ಅವರ ಗುರಿಯನ್ನೇ ನಮ್ಮ ಗುರಿಯನ್ನಾಗಿಸಿಕೊಂಡು ಪ್ರಕೃತಿ ಮಾತೆಯನ್ನು ಉಳಿಸುವ ಕಾರ್ಯದಲ್ಲಿ ತೊಡಗಿದರೆ, ಅದುವೇ ನಂಬಿದ ಗುರುವಿನ ಭಕ್ರರಾಗುವ ಮಾರ್ಗ.


ಪ್ರಕೃತಿ ಮಾತೆಯನ್ನು ಉಳಿಸುವ ಕಾರ್ಯದಲ್ಲಿ ತೊಡಗುವುದೆಂದರೆ ನಮಗೆ ಸಾಧ್ಯವಾದಷ್ಟು ನಮ್ಮ ತನು ಮನ ಧನವನ್ನು ಪ್ರಕೃತಿಯನ್ನು ಉಳಿಸುವ ಕಾರ್ಯಕ್ಕೆ ತೊಡಗಿಸುವುದು ಎಂದು ಎರ್ಥ. ಈ ಸಂದರ್ಭದಲ್ಲಿ ಯಾರು ತಮ್ಮನ್ನು ತಾವು ಸಂಪೂರ್ಣವಾಗಿ ಪ್ರಕೃತಿ ಉಳಿಸುವ ಕಾರ್ಯದಲ್ಲಿ  ತೊಡಗಿಸಿಕೊಂಡಿದ್ದಾರೋ ಅವರಿಗೆ ಯಾವುದೇ ರೂಪದಲ್ಲಿ ಕೈ ಜೋಡಿಸಿದರೂ ಅದು ನಂಬಿದ ಗುರುವಿನ ಹಾದಿಯಲ್ಲಿ ನಡೆಯುವುದಾಗಿದೆ.


ಪೂಜ್ಯ ಶ್ರೀಗಳ ಕೃಪೆಯಿಂದ ಬರೆಯುತ್ತಿರುವ ಈ ಲೇಖನಗಳು ತಮ್ಮ ಮೇಲೆ ಯಾವುದೋ ರೂಪದಲ್ಲಿ ಪ್ರಭಾವ ಬೀರುತ್ತಿದ್ದರೆ, ಪ್ರಕೃತಿ ಮಾತೆಯನ್ನು ಉಳಿಸಿ ಮಾನವ ಕುಲವನ್ನು ಉಳಿಸುವ ಮಹಾನ್ ಕಾರ್ಯದಲ್ಲಿ ಹೇಗೆ ಕೈ ಜೋಡಿಸಬಹುದೆಂದು ತಾವೂ ಕೂಡ ಯೋಚಿಸಬಹುದು.


ಯಾವುದೋ ರೂಪದಲ್ಲಿ ಪ್ರಕೃತಿ ಮಾತೆಯನ್ನು ಉಳಿಸುವ ಕಾರ್ಯದಲ್ಲಿ ತೊಡಗಲು ಜನರನ್ನು ಒಗ್ಗೂಡಿಸಲು ಪ್ರಯತ್ನಿಸಬೇಕಿದೆ. ಭೂಮಿಯ ಮೇಲೆ ಆಯಾ ಸಂದರ್ಭದಲ್ಲಿ ಯಾವ ಕೆಲಸದ ಅವಶ್ಯಕತೆಯಿತ್ತೋ ಅದನ್ನು ಅರಿತು ಆ ಅವಶ್ಯಕತೆಯನ್ನು ಪೂರೈಸುವ ಕಾರ್ಯದಲ್ಲಿ ತೊಡಗುವುದೇ ಆಧ್ಯಾತ್ಮ. ಇಂದು ಭೂಮಿಯ ಮೇಲೆ ಅತ್ಯಂತ ಅವಶ್ಯವಿರುವ ಕೆಲಸವೇ ಪ್ರಕೃತಿ ಮಾತೆಯನ್ನು ಉಳಿಸಿ ಬೆಳೆಸುವ ಕೆಲಸ. ಹಾಗಿದ್ದರೆ, ಈ ಮಹಾನ್ ಕೆಲಸದಲ್ಲಿ ಕೈ ಜೋಡಿಸಿ ನಾವು ಆಧ್ಯಾತ್ಮಿಕ ಜೀವಿಗಳಾಗಬಹುದೆ?


ಭಾರತ ದೇಶ ವಿಶ್ವ ಗುರುವಾಗಬೇಕು ಎಂದು ಕೇವಲ ಬಯಸಿದರೆ ಮಾತ್ರ ಅದು ಆಗುವುದಿಲ್ಲ,ಅದನ್ನು ನಾವು ಒಗ್ಗೂಡಿ ಮಾಡಬೇಕಾಗುತ್ತದೆ.  ನಾವು ನಮ್ಮ ಕಾಲಘಟ್ಟದಲ್ಲಿ ಆಗಿ ಹೋದ ನಡೆದಾಡುವ ದೇವರ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡಿದರೆ ಮಾತ್ರ ಭಾರತ ದೇಶ ವಿಶ್ವ ಗುರುವಾಗಲು ಸಾಧ್ಯ.


ಯೋಚಿಸಿ! ನಿಮ್ಮ ಅಭಿಪ್ರಾಯವನ್ನು ತಿಳಿಸಿ.


🌱🌿🌱🌿🌱🌿🌱🌿

ಬಸವರಾಜ (ಅಭೀಃ)-9449303880

 ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಮಂಗಳವಾರ, ಫೆಬ್ರವರಿ 14, 2023

ನಡೆದಾಡುವ ದೇವರ ನಡೆದಾಟ ಕೊನೆಯಾಯಿತೆ? ಅಥವಾ ಅವರ ಪ್ರಕೃತಿ ಉಳಿಸುವ ಸತ್ಯ ಸಂಕಲ್ಪ ಇಡೇರಲು ಇನ್ನೂ ನಡೆದಾಡುತ್ತಿದ್ದಾರೆಯೇ?


ಆಧ್ಯಾತ್ಮಿಕ ಗುರುಗಳಿಗೆ ಅವರ ದೇಹಕ್ಕೆ ಸಾವು ಇದೆ ಹೊರತು, ಅವರ ಸತ್ಯ ಸಂಕಲ್ಪಕ್ಕೆ ಸಾವಿಲ್ಲ. ಹಿಂದೆ ಅನೇಕ ಆಧ್ಯಾತ್ಮಿಕ ಗುರುಗಳು ಆಗಿ ಹೋಗಿದ್ದಾರೆ. ಅವರಲ್ಲಿ ಅನೇಕರು ಅವರ ಸಂಕಲ್ಪ ನೆರವೇರಲು ಇನ್ನೂ ಕೂಡ ಭೂಮಿಯ ಮೇಲೆ ಕೆಲಸ ಮಾಡುತ್ತಿದ್ದಾರೆ. 5-6 ಸಾವಿರ ವರ್ಷಗಳಾದರೂ ಸಹ ಅನೇಕ ಆಧ್ಯಾತ್ಮಿಕ ಜೀವಿಗಳನ್ನು ಇನ್ನೂ ಕೂಡ ನೆನೆಯುವುದಕ್ಕೆ ಮುಖ್ಯ ಕಾರಣವೇ ಅವರ ಸತ್ಯ ಸಂಕಲ್ಪ. ಈ ನಿಟ್ಟಿನಲ್ಲಿ *ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ* ಯವರು ಅವರ ಪ್ರಕೃತಿ ಉಳಿಸುವ ಸತ್ಯ ಸಂಕಲ್ಪ ಇಡೇರಲು ತಮ್ಮ ಅನೇಕ ಭಕ್ತರ ಮುಖಾಂತರ ಖಂಡಿತ ಕೆಲಸ ಪ್ರಾರಂಭಿಸಿದ್ದಾರೆ. ಈ ಬರಹಕ್ಕೆ ಮುಖ್ಯ ಕಾರಣವೇ ಅವರ ಅನುಗ್ರಹ. 
ನಾನು ಸುಮಾರು 20 ವರ್ಷಗಳ ಹಿಂದೆ ಶ್ರೀಗಳು *ಕೃಷಿ ವಿಶ್ವವಿದ್ಯಾಲಯ, ಧಾರವಾಡ* ದಲ್ಲಿ ಮಾಡಿದ ಪ್ರವಚನವನ್ನು ನೂರಕ್ಕಿಂತ ಅಧಿಕ ಬಾರಿ ಆ ಸಂದರ್ಭದಲ್ಲಿ ಕ್ಯಾಸೆಟ್ ಮುಖಾಂತರ ಕೇಳಿದ್ದೆ. ಆ ಪ್ರವಚನದ ಮಾತುಗಳು, ನನ್ನ ಹೃದಯದಲ್ಲಿ ಇನ್ನೂ ಕೂಡ ಅಚ್ಚಳಿಯದಂತೆ ಉಳಿದಿವೆ. ಆ ಪ್ರವಚನದಲ್ಲಿ ಒಂದು ಕಥೆಯ ಮೂಲಕ ಹೇಳಿದ ಮಾತು ಇಂದು ನಿಜವಾಗುತ್ತಿದೆ ಏನೋ ಎಂಬ ವಿಚಾರ ಮೂಡುತ್ತಿದೆ. ಏಕೆಂದರೆ, ಮುಂದಿನ 20-30 ವರ್ಷಗಳಲ್ಲಿ ಪ್ರಕೃತಿಯ ನಾಶದಿಂದಾಗಿ ಸುಮಾರು 200 ಕೋಟಿ ಜನ ಸಾವಿಗೀಡಾಗುವ ಸಾಧ್ಯತೆಯಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ಈಗಾಗಲೇ, ಅದರ ಪರಿಣಾಮ‌ ಹಲವು ರೂಪಗಳಲ್ಲಿ ವ್ಯಕ್ತವಾಗುತ್ತಿದೆ.

ಆ ಕಥೆ ಹೀಗಿದೆ, ಸಾವಿರಾರು ಕಿಲೋಮೀಟರ್ ವಿಸ್ತೀರ್ಣವಿರುವ ಒಂದು ಮರಭೂಮಿಯ ಮಧ್ಯೆ ಮುತ್ತು ರತ್ನಗಳಿಂದ ಕೂಡಿದ ನಿಧಿ ಇದೆ ಎಂದು ಯಾರೋ ಒಬ್ಬ ವ್ಯಕ್ತಿಗೆ ತಿಳಿಯುತ್ತದೆ. ಆ ನಿಧಿ ಸಿಕ್ಕರೆ, ಜೀವನಪೂರ್ತಿ ನಾನು ಮತ್ತು ನನ್ನ ಮುಂದಿನ ಪೀಳಿಗೆ ಆರಾಮವಾಗಿ ಬದುಕಬಹುದು ಎಂದು ಆ ವ್ಯಕ್ತಿ ಯೋಚಿಸಿದ. ಅದಕ್ಕಾಗಿ, ಮರಭೂಮಿಯ ಮಧ್ಯದಲ್ಲಿರುವ ನಿಧಿ ಹುಡುಕಲು ಹೊರಟ. ಒಬ್ಬನೇ ಹೊರಟ, ಇನ್ನೊಬ್ಬರನ್ನು ಜೊತೆಯಾಗಿಸಿಕೊಂಡರೆ ಅವರಿಗೂ ಕೂಡ ನಿಧಿ ಹಂಚಬೇಕಾಗುತ್ತದೆ ಎಂದು ಯೋಚಿಸಿದ. ಅದಕ್ಕಾಗಿ, ಒಬ್ಬನೇ ಹೊರಟ. ಸುಮಾರು ಹತ್ತು ದಿನಗಳು ಕಳೆದ ನಂತರ, ಮರಭೂಮಿಯ ಮಧ್ಯದಲ್ಲಿ ನಿದ್ರಿಸುತ್ತಿರುವ ಸಂದರ್ಭದಲ್ಲಿ ಅವನ ಒಂಟೆ ಅದರ ಮೇಲೆ‌‌ ಇರುವ ಆಹಾರ ಮತ್ತು ನೀರು ಸಮೇತ ಕಾಣೆಯಾಗಿತ್ತು. ಅವನು ನಿದ್ರೆಯಿಂದ ಎದ್ದ ತಕ್ಷಣ ಆತಂಕಗೊಂಡು ನಿಧಿ ಹುಡುಕಾಟ ಮರೆತು ಒಂಟೆ ಹುಡುಕಲು ಪ್ರಾರಂಭಿಸಿದ. ಎಷ್ಟು ಹುಡುಕಿದರೂ ಒಂಟೆ ಸಿಗಲಿಲ್ಲ. ಕೆಲವು ಗಂಟೆಗಳ ಹುಡುಕಾಟದ ನಂತರ ಒಂಟೆಯನ್ನು ಮರೆತು ಆಹಾರ ಸಿಕ್ಕರೆ ಸಾಕು ಎಂದು ಅಹಾರ ಹುಡುಕಲು ಪ್ರಾರಂಭಿಸಿದ. ಮರಭೂಮಿಯಲ್ಲಿ ತಿನ್ನಲು ಏನೂ ಸಿಗದಿರುವಾಗ, ಆಹಾರವನ್ನು ಮರೆತು ಸ್ವಲ್ಪ ನೀರು ಸಿಕ್ಕರೆ ಸಾಕು ಬದುಕಿಕೊಳ್ಳುತ್ತೇನೆ ಎಂದು ನೀರು ಹುಡುಕಲು ಪ್ರಾರಂಭಿಸಿದ. 

ಎಷ್ಟು ಹುಡುಕಿದರೂ ಸಹ ನೀರು ಸಿಗಲಿಲ್ಲ, ಆಗ ತನ್ನನ್ನು ಯಾವಾಗಲೂ ಆರಾಮವಾಗಿ ಇಡುವುದೆಂದು ತಿಳಿದಿದ್ದ ನಿಧಿ ಅಸೆ ಮರೆತು ಹೋಗಿ ಕೇವಲ ಒಂದು ತೊಟ್ಟು ನೀರು ಸಿಕ್ಕರೆ ಸಾಕು ನಾನು ಬದುಕಿಕೊಳ್ಳುತ್ತೇನೆ ಎಂದು ನೀರು ಮಾತ್ರ ಹುಡುಕತೊಡಗಿದ. ಅವನ ಮನಸ್ಸಿನ ತುಂಬ ನೀರು ಬಿಟ್ಟರೆ ಏನೂ ಇರಲಿಲ್ಲ, ಕೇವಲ ನೀರು ಮಾತ್ರ ಕಾಣುತ್ತಿತ್ತು. ಕುಡಿಯಲು ಒಂದು ತೊಟ್ಟು ನೀರು ಸಿಕ್ಕರೆ ಸಾಕು ಬದುಕಿಕೊಳ್ಳುತ್ತೇನೆ ಎಂದು ಮನಸ್ಸು ಹೇಳುತ್ತಿತ್ತು. ಆದರೆ, ಹೊರಗೆ ಎಷ್ಟು ಹುಡುಕಿದರೂ ನೀರು ಸಿಗಲಿಲ್ಲ.

ಇನ್ನು ಬದುಕುಳಿಯಲು ಸಾಧ್ಯವಿಲ್ಲ ಎಂಬ ಸಂದರ್ಭ ಬಂದೊದಗಿದಾಗ, ವಿಶಾಲವಾದ ಮರಭೂಮಿಯ ಮಧ್ಯೆ ಒಂದು ಸಣ್ಣ ಟೆಂಟ್ ಕಾಣಿಸಿತು. ಅದನ್ನು ನೋಡಿ ನಾನು ಬದುಕಿಕೊಂಡೆ ಎಂದುಕೊಂಡ. ಒಂದು ತೊಟ್ಟು ನೀರಿಗಾಗಿ ಅದರ ಹತ್ರಿರ ಓಡೋಡಿ ಹೋದ, ಟೆಂಟ್ ಒಳಗೆ ಕೆಲವು ಮಣ್ಣಿನ ಪಾತ್ರೆಗಳು ಕಂಡವು. ಅವುಗಳ ಒಳಗೆ ನೀರು ಇರಬಹುದೆಂದು ತಿಳಿದು ಅತೀವ ಸಂತೋಷವಾಯಿತು. ಪಾತ್ರೆಗಳ ಹತ್ತಿರ ಹೋಗಿ ಅವುಗಳ ಮೇಲಿರುವ ಮುಚ್ಚಳವನ್ನು ತೆಗೆದು ನೋಡಿದಾಗ ಅವುಗಳ ತುಂಬ ಮುತ್ತು ರತ್ನಗಳು ಕಂಡವು. ನೀರಿಗಾಗಿ ಎಲ್ಲ ಪಾತ್ರೆಗಳನ್ನು ತೆರೆದು ನೋಡಿದರೂ, ಆ ಎಲ್ಲ‌ ಪಾತ್ರೆಗಳು ಮುತ್ತು ರತ್ನಗಳಿಂದ ತುಂಬಿದ್ದವು. ಹತಾಶೆಗೊಂಡು ಸಿಟ್ಟಿನಿಂದ ಪಾತ್ರೆಗಳಲ್ಲಿರುವ ಮುತ್ತು ರತ್ನಗಳನ್ನು ಹೊರ ಚೆಲ್ಲಿದ. ಸೂರ್ಯನ ಕಿರಣಗಳು ಆ ಮತ್ತು ರತ್ನಗಳನ್ನು ಸ್ಪರ್ಷಿಸಿದಾಗ, ಅವು ಪಳ ಪಳನೆ ಹೊಳೆಯುವತ್ತಾ ಹೇಳುತ್ತಿದ್ದವು *ನಾವು ಇರುವುದೇ ಮನುಷ್ಯರಿಗೆ ಹುಚ್ಚು ಹಿಡಿಸುವುದಕ್ಕಾಗಿ, ಬದುಕಿಸುವುದಕ್ಕಾಗಿ ಅಲ್ಲ* ಎಂದು.

ಸುಮಾರು 20 ವರ್ಷಗಳ ಹಿಂದೆ ಶ್ರೀಗಳು ಹೇಳಿದ ಆ ಮಾತು ಇಂದು ಹಲವು ರೂಪದಲ್ಲಿ ನಿಜವಾಗುತ್ತಿದೆ‌ ಏನೋ ಎಂದು ಅನಿಸುತ್ತಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಹೇಳಿದ ಆ ಮಾತುಗಳು ಪ್ರಕೃತಿ ನಾಶವಾಗಿ ಮುಂದೆ ಮನುಷ್ಯನಿಗೆ ಆಹಾರ ಮತ್ತು ನೀರು ದೊರೆಯದಿರುವ ಸಂದರ್ಭ ಬರಬಹುದು ಎಂಬ ಮನ್ಸೂಚನೆಯನ್ನು ಸೂಕ್ತ ವೇದಿಕೆಯಲ್ಲಿ ನೀಡಿದ್ದಾಗಿದ್ದವು ಎಂಬುದು ನನ್ನ ಅಭಿಪ್ರಾಯ.

ಇಂದು ನಾವು ಅನೇಕರು ನಮ್ಮನ್ನು ಯಾವುದು (ಪ್ರಕೃತಿ) ಬದುಕುಳಿಸಲು ಸಾಧ್ಯ ಅದನ್ನು ಮರೆತು, ಮುಂದೆ ನಮ್ಮನ್ನು ಬದುಕುಳಿಸಲು ಸಾಧ್ವವಿರದ ಹಣ ಮತ್ತು ಅಧಿಕಾರದ ಹಿಂದೆ ಬೆನ್ನು ಹತ್ತಿದ್ದೇವೆ. ಈ ಮನಸ್ಥಿತಿ ಕೇವಲ ನಮ್ಮನ್ನು ಮಾತ್ರ ಹಾಳು ಮಾಡದೇ ಒಟ್ಟು ಸಮಾಜವನ್ನೇ ಹಾಳು ಮಾಡುತ್ತದೆ.

ಇಂದು, ಶ್ರೀಗಳ ಮಾತುಗಳನ್ನು ಅಲಿಸಿ ಅವರ ಪ್ರಭಾವಕ್ಕೆ ಒಳಗಾದವರು ಅವರ ಪ್ರಕೃತಿ ಉಳಿಸುವ ಸತ್ಯ ಸಂಕಲ್ಪಕ್ಕೆ ಕೈ ಜೋಡಿಸಿ ಪ್ರಕೃತಿಯನ್ನು ಉಳಿಸುವ ಕಾರ್ಯದಲ್ಲಿಯೇ ಪೂಜ್ಯ ಶ್ರೀಗಳನ್ನು ಕಾಣುವ ಮನೋಭಾವ ಬೆಳೆಸಿಕೊಳ್ಳುವ ಅವಶ್ಯಕತೆಯಿದೆ.

ಪ್ರಕೃತಿಯ ಅಭಿವ್ಯಕ್ತಿಯಾದ ಹಸಿರು ಉಳಿದರೆ ಮಾತ್ರ ಮಾನವನ‌ ಉಸಿರು ಉಳಿಯಲು ಸಾಧ್ಯ. ಹೆಚ್ಚು ಜಮೀನು ಉಳಿಮೆ ಮಾಡುವ ರೈತನ ಕೈಯಲ್ಲಿ ಇರುವುದರಿಂದ, ಇಂದು ನಾವು ರೈತನನ್ನು ಉಳಿಸಲು ಮುಂದಾದರೆ ಮಾತ್ರ ಹಸಿರು ಉಳಿದು ಎಲ್ಲರ ಉಸಿರು ಉಳಿಯಲು ಸಾಧ್ಯ.

 ಶ್ರೀಗಳು ದೇಹದಾರಿಯಾಗಿ ನಡೆದಾಡುತ್ತಿರುವ ಸಂದರ್ಭದಲ್ಲಿ ಆಯಾ ಸ್ಥಳಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಹೇಳಿದ ಮಾತುಗಳನ್ನು ನಾವು ಮರಳಿ ಮೆಲುಕು ಹಾಕಿ ಇತರರಿಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗುವ ಸಂದರ್ಭ ಬಂದೊದಗಿದೆ.

ಯೊಚಿಸಿ! ನಿಮ್ಮ ಅಭಿಪ್ರಾಯ ತಿಳಿಸಿ.

🌱🌿🌱🌿🌱🌿🌱🌿
ಬಸವರಾಜ (ಅಭೀಃ)-9449303880
 *ನಮ್ಮ ಮಕ್ಕಳನ್ನು ಉಳಿಸಿ* ಅಭಿಯಾನದ ಸ್ವಯಂ ಸೇವಕ, ವಿಜಯಪುರ.